

ಜಿನೀವಾ: ಜಾಗತಿಕವಾಗಿ ಪ್ರತಿ 10 ಜನರಲ್ಲಿ ಒಬ್ಬರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಪ್ರಸ್ತುತ ದೃಢವಾಗಿರುವ ಸೋಂಕಿತರಿಗಿಂತ 20 ಪಟ್ಟು ಹೆಚ್ಚು ಜನರು ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ ಎಂದು ಡಬ್ಲ್ಯೂಎಚ್ಒನ ತುರ್ತು ಪರಿಸ್ಥಿತಿಗಳ ಮುಖ್ಯಸ್ಥ ಡಾ.ಮೈಕೆಲ್ ರಯಾನ್ ತಿಳಿಸಿದ್ದಾರೆ.
ವಿಶ್ವದಲ್ಲಿ 760 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ 76 ಕೋಟಿ ಜನರು ಸೊಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಪ್ರಮಾಣವು ಹಳ್ಳಿ ಮತ್ತು ನಗರಗಳಲ್ಲಿ ವಿಭಿನ್ನವಾಗಿದೆ. ಹಾಗೆಯೇ ವಿವಿಧ ಭಾಗಗಳಲ್ಲಿ್ಲ ಸೋಂಕಿನ ಪ್ರಮಾಣ ಏರಿಳಿತವಾಗಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ಸೋಂಕು ಹೆಚ್ಚುತ್ತಿದೆ. ಯುರೋಪ್ ಮತ್ತು ಪೂರ್ವ ಮೆಡಿಟೇರಿಯನ್ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಆಫ್ರಿಕಾ ಮತ್ತು ಪಶ್ಚಿಮ ಪೆಸಿಫಿಕ್ ಭಾಗದಲ್ಲಿ ಸೋಂಕು ಕಡಿಮೆಯಿದೆ ಎಂದು ಮೈಕಲ್ ಹೇಳಿದ್ದಾರೆ. ಈಗಾಗಲೇ ಸಾವಿನ ಪ್ರಮಾಣವನ್ನು ಸಾಕಷ್ಟು ನಿಯಂತ್ರಿಸಲಾಗಿದೆ. ಆದರೆ ಅದನ್ನು ಇನ್ನಷ್ಟು ನಿಯಂತ್ರಿಸಬಹುದಾದ ಸಾಮರ್ಥ್ಯ ನಮ್ಮಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕರೊನಾ ಸೋಂಕು ಸೆಪ್ಟೆಂಬರ್ ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ಒಂದು ವಾರದಿಂದ ಸೋಂಕು ಇಳಿಮುಖವಾಗಿದೆ. ಎಲ್ಲ ರಾಜ್ಯಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಇಳಿಕೆಯಾಗಿದೆ. ಕಳೆದ ವಾರ ಪ್ರತಿದಿನ ಸರಾಸರಿ 93 ಸಾವಿರ ಪ್ರಕರಣ ಪತ್ತೆಯಾಗುತ್ತಿತ್ತು. ಈ ವಾರದಲ್ಲಿ ಅದು 83 ಸಾವಿರಕ್ಕೆ ಇಳಿದಿದೆ. ಪರೀಕ್ಷೆಯ ಪ್ರಮಾಣವೂ ಹೆಚ್ಚಳವಾಗಿದೆ. ದತ್ತಾಂಶಗಳನ್ನು ಗಮನಿಸಿದರೆ ಸೋಂಕು ಸೆಪ್ಟೆಂಬರ್ನಲ್ಲಿ ಗರಿಷ್ಠ ಮಟ್ಟ ತಲುಪಿರುವುದು ತಿಳಿದುಬರುತ್ತದೆ. ಹಾಗೆಂದ ಮಾತ್ರಕ್ಕೆ ಸೋಂಕಿನಿಂದ ನಾವು ಮುಕ್ತರಾಗಿದ್ದೇವೆ ಎಂದರ್ಥವಲ್ಲ ಎಂದು ಸಚಿವಾಲಯ ಹೇಳಿದೆ. ಭಾನುವಾರ ದೇಶದಲ್ಲಿ 74,500 ಪ್ರಕರಣಗಳು ದೃಢವಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 66 ಲಕ್ಷಕ್ಕೂ ಅಧಿಕವಾಗಿದೆ. ಒಂದೇ ದಿನ 76,700ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 55.9 ಲಕ್ಷದಷ್ಟಾಗಿದೆ. 9.34 ಲಕ್ಷ ಸಕ್ರಿಯ ಪ್ರಕರಣ ಬಾಕಿಯಿದೆ. 24 ಗಂಟೆಗಳಲ್ಲಿ 903 ಸೋಂಕಿತರು ಮೃತರಾಗಿದ್ದು, ಮೃತರ ಸಂಖ್ಯೆ 1.02 ಲಕ್ಷ ಮೀರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.