ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದಾಗಿ ಜೀವವೇ ಹೋಯ್ತು; ತಲೆಗೆ ಗಂಭೀರ ಗಾಯವಾಗಿದ್ದ ವ್ಯಕ್ತಿ ಸಾವು

crime guns
Published on

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದು, ಇನ್ನೊಬ್ಬನ ವಿರುದ್ಧ ಕೊಲೆ ಆರೋಪದ ಕೇಸು ದಾಖಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸಾವಿಗೀಡಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜಗದೀಶ್ ಸಾವಿಗೀಡಾಗಿದ್ದು, ಹೇಮಂತ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮೈಸೂರು ರಸ್ತೆಯ ನ್ಯೂ ಟಿಂಬರ್ ಯಾರ್ಡ್ ಲೇಔಟ್​ನ ಲಕ್ಷ್ಮೀ ಸಾಮಿಲ್ ಬಳಿ ಜ. 14ರಂದು ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ವ್ಯಕ್ತಿ ನಿನ್ನೆ ಸಾವಿಗೀಡಾಗಿದ್ದ.

ಜ. 14ರಂದು ಸಾಮಿಲ್ ಎದುರಿದ್ದ ಹೇಮಂತ್ ಹಾಗೂ ಜಗದೀಶ್ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಆಗ ಹೇಮಂತ್ ಜಗದೀಶ್​ ಕಪಾಳಕ್ಕೆ ಬಾರಿಸಿದ್ದ. ಹೊಡೆತ ತೀವ್ರತೆಗೆ ರಸ್ತೆಗೆ ಬಿದ್ದ ಜಗದೀಶ್​ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಪರಿಚಿತರ ಮೂಲಕ ಪತ್ನಿ ಪದ್ಮಗೆ ಮಾಹಿತಿ ಗೊತ್ತಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಆಕೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಜಗದೀಶ್ ನಿನ್ನೆ ಸಾವಿಗೀಡಾಗಿದ್ದು, ಪದ್ಮ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಹೇಮಂತ್​ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net