

ಅವರು ಶನಿವಾರ(31) ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಮಾಹಿತಿ ಹಕ್ಕು ಅಧಿನಿಯಮ-2005ರ ಕುರಿತು ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕೊಪ್ಪಳ: ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಅರಿವನ್ನು ಮೂಡಿಸುವುದು ಅತ್ಯವಶ್ಯಕವಾಗಿದ್ದು, ಈ ಕುರಿತು ಬರುವ ದಿನಗಳಲ್ಲಿ ಕರ್ನಾಟಕ ಮಾಹಿತಿ ಆಯೋಗವನ್ನು ಜನರ ಬಳಿ ಕೊಂಡೊಯ್ಯುವ ಚಿಂತನೆಗಳನ್ನು ಆಯೋಗದಿಂದ ಮಾಡಲಾಗುತ್ತಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಹೇಳಿದರು.
ಜಿಲ್ಲಾ ಮಟ್ಟದಲ್ಲಿಯೂ ಸಾರ್ವಜನಿಕರ ಅಹವಾಲು ಸಭೆಗಳನ್ನು ಮಾಡುವ ಪ್ರಯತ್ನ ನಡೆಯುತ್ತಿದೆ. ಸಚಿವರು, ಶಾಸಕರುಗಳ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿಯೂ ಆರ್.ಟಿ.ಐ ಕಾಯ್ದೆಯ ಅನುಷ್ಠಾನದ ಬಗ್ಗೆ ಚರ್ಚೆಗಳಾಗಬೇಕೆಂದು ರಾಜ್ಯ ಮಾಹಿತಿ ಆಯೋಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಪ್ರಬಲವಾಗಬೇಕು, ಜನರಿಗೆ ಸರ್ಕಾರದ ಮಹಿತಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್ ನೇತೃತ್ವದ ಸರ್ಕಾರವು 2005ರ ಅಕ್ಟೋಬರ್ 5 ರಂದು ಆರ್.ಟಿ.ಐ ಕಾಯ್ದೆಯನ್ನು ಜಾರಿಗೆಗೊಳಿಸಿತು. ಈ ಕಾಯ್ದೆಯನ್ನು ಜಾರಿ ತಂದ ಮೊಟ್ಟ ಮೊದಲ ರಾಜ್ಯ ಕರ್ನಾಟಕವಾಗಿದೆ. ಆರ್.ಟಿ.ಐ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಅರಿವನ್ನು ಮೂಡಿಸಲು ಕರ್ನಾಟಕ ಮಾಹಿತಿ ಆಯೋಗವನ್ನು ಜನರ ಬಳಿ ಕೊಂಡೊಯ್ಯುವ ಚಿಂತನೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ. ಶಿಕ್ಷಣ ಹಂತದಲ್ಲಿಯೇ ಮಕ್ಕಳಿಗೂ ಆರ್.ಟಿ.ಐ ಕಾಯ್ದೆಯ ಕುರಿತು ಅರಿವನ್ನು ಮೂಡಿಸುವಂತಹ ಕೆಲಸವಾಗಬೇಕಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಕಾಯ್ದೆ ಬಗ್ಗೆ ಎಲ್ಲರಲ್ಲಿಯೂ ಸ್ಪಷ್ಟ ಮಾಹಿತಿ ಇದ್ದಾಗ ಮಾತ್ರ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್ ಕುಮಾರ್ ಅವರು ಮಾತನಾಡಿ, ಹಿಂದಿನ ಕಾಲದ ರಾಜರ ಆಳ್ವಿಕೆಯ ಕಾಲದಲ್ಲಿ ಜನರು ಪ್ರಶ್ನೆ ಮಾಡುವದಾಗಲಿ ಅಥವಾ ಅವರನ್ನು ನೋಡುವ ಹಾಗೆ ಇರಲಿಲ್ಲ. ದೊಡ್ಡ ಸಮಾರಂಭಗಳಂತಹ ಸಂದರ್ಭದಲ್ಲಿ ಅವರ ಮುಖ ನೋಡಬೇಕಿತ್ತು. ಆದರೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಿಲ್ಲ. ಈ ದೇಶದ ರಾಷ್ಟ್ರಪತಿಯಿಂದ ಹಿಡಿದು. ಆಗರ್ಭ ಶ್ರೀ ಮಂತ ಹಾಗೂ ಒಬ್ಬ ಬಡವನಿಗೂ ಒಂದೇ ಮತ ನೀಡುವದರ ಜೊತೆಗೆ ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದರು.
ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ್ ಎಸ್. ಅವರು ಮಾತನಾಡಿ, ದೇಶದಲ್ಲಿ ಮೊದಲು ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಕೆಲವೆ ಕೆಲವು ಚಾನಾಯಿತ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳಿಗೆ ಮಾತ್ರ ಮಾಹಿತಿ ಸಿಗುತ್ತಿತ್ತು. 2005ರಲ್ಲಿ ಡಾ.ಮನಮೋಹನ ಸಿಂಗ್ ರವರ ಸರ್ಕಾರವು ಆರ್.ಟಿ.ಐ ಕಾಯ್ದೆಯನ್ನು ಜಾರಿಗೆ ತಂದ ನಂತರ ಈ ದೇಶದ ಜನ ಸಾಮನ್ಯರಿಗೂ ಮಾಹಿತಿ ಸಿಗುತ್ತಿದೆ. ಇಂದಿನ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಪ್ರಜೆಗಳಾಗಿದ್ದು, ಮಾಹಿತಿ ಹಕ್ಕು ಅಧಿನಿಯಮ-2005ರ ಕುರಿತು ಹೆಚ್ಚಿನ ರೀತಿಯಲ್ಲಿ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ವಿದ್ಯಾರ್ಥಿಗಳಿ ಕಿವಿ ಮಾತು ಹೇಳಿದರು.
ರಾಜ್ಯ ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಅವರು ಮಾತನಾಡಿ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಮಾಹಿತಿ ಪ್ರಾಧಿಕಾರಗಳು ಕರ್ನಾಟಕ ಮಾಹಿತಿ ಆಯೋಗದ ವ್ಯಾಪ್ತಿಗೊಳಪಡುತ್ತವೆ. ರಾಜ್ಯ ಮಾಹಿತಿ ಆಯೋಗವು ಕೇಂದ್ರ ಮಾಹಿತಿ ಆಯೋಗದ ಸ್ವರೂಪದಲ್ಲಿ ರಚನೆಯಾಗಿದೆ. ನಮ್ಮ ರಾಜ್ಯದಲ್ಲಿ ಹತ್ತು ಮಾಹಿತಿ ಆಯುಕ್ತರಿದ್ದು, ಒಬ್ಬರು ಮುಖ್ಯ ಆಯುಕ್ತರಿದ್ದಾರೆ. ಬೆಂಗಳೂರಿನಲ್ಲಿ ಎಂಟು ಪೀಠಗಳಿವೆ ಹಾಗೂ ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಒಂದು ಪೀಠಗಳಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಕರ್ನಾಟಕ ಮಾಹಿತಿ ಆಯೋಗಕ್ಕೆ ದ್ವಿತಿಯ ಮೇಲ್ಮನವಿಗಳು ಬಂದಾಗ, ಆ ಅರ್ಜಿಗಳನ್ನು ಸ್ವೀಕರಿಸಿ, ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರು ಕಾರ್ಯಾಗಾರದ ಅಧ್ಯಕ್ಷತೆ ಮತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಹಿತಿ ಹಕ್ಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯಕತೆಯಿದೆ. ಮಾಹಿತಿ ಹಕ್ಕು ಅಧಿನಿಯಮ-2005ರ ಕುರಿತು ಕೊಪ್ಪಳ ವಿಶ್ವವಿದ್ಯಾಲಯದಿಂದ ಕಾರ್ಯಾಗಾರ ಹಮ್ಮಿಕೊಂಡಿರುವ ಈ ದಿನ ಒಂದು ವಿಶೇಷ ದಿನವೇ ಆಗಿದೆ. ಮೇ 31 ಇಂದು ರಾಜಮಾತೆ ಅಹಲ್ಯಬಾಯಿ ಹೋಳ್ಕರ್ ರವರ ಜನ್ಮ ದಿನವು ಆಗಿದೆ. ಮಧ್ಯ ಭಾರತವನ್ನು ಆಳಿದಂತಹ ಹೋಳ್ಕರ ರಾಜ್ಯ ಮನೆತನಕ್ಕೆ ಸೇರಿದ ಅಹಲ್ಯಾಬಾಯಿ ಹೋಳ್ಕರ್, ಯುದ್ಧದಲ್ಲಿ ತನ್ನ ಗಂಡ ಮರಣ ಹೊಂದಿದ ನಂತರವೂ ಕುಗ್ಗದೆ, ಒರ್ವ ಹೆಣ್ಣಾಗಿ ತೊಟ್ಟಿಲು ತೂಗುವ ಕೈಯಿಂದ ಖಡ್ಗವನ್ನು ಹಿಡಿದು ಇಡೀ ಸಾಮ್ರಾಜ್ಯವನ್ನು ರಕ್ಷಣೆಮಾಡಿದಳು. ಇದಲ್ಲದೇ ದೇಶದ ಅನೇಕ ದೇವಾಲಯಗಳನ್ನು ಜಿರ್ಣೋದ್ಧಾರ ಮಾಡಿದ್ದಳು ಎಂದರು.
ಕಾರ್ಯಾಗಾರದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಸಚಿವರಾದ ಪ್ರೊ.ಕೆ.ವಿ.ಪ್ರಸಾದ್, ಗಂಗಾವತಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಮುಮ್ತಾಜ್ ಬೇಗಂ, ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಕೆ.ಎಚ್.ಛತ್ರದ, ಕೊಪ್ಪಳ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮತ್ತು ಸಿಂಡಿಕೇಟ್ ಹಾಗೂ ಆಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿಶ್ವ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.