

ತುಮಕೂರು: ರಾಮನಗರಕ್ಕೆ ಹೇಮಾವತಿ ನದಿ ನೀರು ಕೊಂಡೊಯ್ಯಲು ನಡೆಯುತ್ತಿರುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧದ ಪ್ರತಿಭಟನೆ ತೀವ್ರಗೊಡಿದ್ದು, ಪರಿಣಾಮ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸುಂಕಾಪುರಕ್ಕೆ ಲಗ್ಗೆಯಿಟ್ಟ ಸಾವಿರಾರು ರೈತರು, ಪ್ರತಿಭಟನಾಕಾರರು ಜೆಸಿಬಿ ಮೂಲಕ ನಾಲೆಯನ್ನು ಮುಚ್ಚಲು ಯತ್ನಿಸಿದರು. 5 ಜೆಸಿಬಿ ಮೂಲಕ ದೊಡ್ಡ, ದೊಡ್ಡ ಪೈಪ್ಗಳನ್ನ ಉರುಳಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜೆಸಿಬಿ ಮೂಲಕ ನಾಲೆ ಮುಚ್ಚಿಸುವಾಗ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಾಮಗಾರಿಗೆ ಮಣ್ಣು ಹಾಕಿ ರೈತರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಕಾಮಗಾರಿಯನ್ನು ಸ್ಥಗಿತಗೊಳಿಸಿತು.
ಹೋರಾಟ ನಡೆಸಲು ಮುಂದಾದ ಶಾಸಕ ಸುರೇಶ್ಗೌಡ, ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್, ರೈತ ಮೋರ್ಚಾ ಮುಖಂಡರಾದ ಬ್ಯಾಟರಂಗೇಗೌಡ, ದಿಲೀಪ್ ಕುಮಾರ್, ಚಂದ್ರಶೇಖರ್, ರೈತ ಸಂಘದ ಗೋವಿಂದರಾಜು, ವಿವಿಧ ಮಠಾಧೀಶರು ಸೇರಿದಂತೆ ಮೂರು ಬಸ್ಗಳಲ್ಲಿ ಬಂದ ನೂರಕ್ಕೂ ಹೆಚ್ಚು ಹೋರಾಟಗಾರರನ್ನು ಅಡಿಷನಲ್ ಎಸ್ಪಿ ಗೋಪಾಲ್, ಸಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಜಿಲ್ಲೆಯ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ಇನ್ನೂ ಪ್ರತಿಭಟನೆ ಬಳಿಕ ಹೇಮಾವತಿ ಲಿಂಕ್ ಕೆನಾಲ್ನ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಸ್ಥಗಿತ ಬೆನ್ನಲ್ಲೇ ರೈತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ಕಾಮಗಾರಿ ಹಿಂಪಡೆಯಲು 1 ತಿಂಗಳ ಗಡುವು ನೀಡಿದ್ದಾರೆ.
ನಿಷೇಧಾಜ್ಞೆ ನಡುವೆಯೂ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ, ಗುಬ್ಬಿ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ 144 ಸೆಕ್ಷನ್ ಜಾರಿ ಮಾಡಿ, ಪ್ರತಿಭಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು.