

ನವದೆಹಲಿ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ನಿಶ್ಚಿತತೆ ಇಲ್ಲ. ಜುಲೈ, ಆಗಸ್ಟ್ ಎಂದೆಲ್ಲಾ ಹೇಳಲಾಗುತ್ತಿದ್ದರೂ ಪರಿಸ್ಥಿತಿ ಅಲ್ಲಿಯವರೆಗೆ ನಿಯಂತ್ರಣಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆಯೂ ಹಲವಾರು ರಾಜ್ಯಗಳಲ್ಲಿ ಹೇಳಲೂ ಸಾಧ್ಯವಿಲ್ಲ.
ಅನೇಕ ತಿಂಗಳವರೆಗೆ ಮಕ್ಕಳು ಮನೆಯಲ್ಲಿಯೇ ಇದ್ದು, ಅವರ ಪಾಠಕ್ಕೆ ಎಲ್ಲಿ ಧಕ್ಕೆಯಾಗಿಬಿಡುತ್ತದೆಯೋ ಎಂಬ ಆತಂಕದಲ್ಲಿ ಹಲವಾರು ಪಾಲಕರು ಇದ್ದಾರೆ. ಕೆಲವು ಶಾಲೆಗಳು ಆನ್‌ಲೈನ್ ಕೋರ್ಸ್ ಆರಂಭಿಸಿವೆಯಾದರೂ, ಇನ್ನೂ ಹಲವೆಡೆ ಇದು ಕಷ್ಟಸಾಧ್ಯವಾದ ಮಾತು.
ಇವೆಲ್ಲವುಗಳನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳು ಮನೆಯಲ್ಲಿಯೇ ಒಂದರಿಂದ 12ನೇ ತರಗತಿವರೆಗಿನ ಪಠ್ಯಕ್ರಮವನ್ನು ಸುಲಭದಲ್ಲಿ ಅಧ್ಯಯನ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ ದೂರದರ್ಶನ ಯೋಜನೆ ರೂಪಿಸುತ್ತಿದೆ.
ಮಾನವ ಸಂಪನ್ಮೂಲ ಸಚಿವಾಲಯವು ಸಚಿವಾಲಯವು ದೂರದರ್ಶನದಲ್ಲಿ 12 ಡೈರೆಕ್ಟ್ ಟು ಹೋಮ್ (ಡಿಟಿಎಚ್) ಚಾನೆಲ್‌ಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವೂ ಆಗಿದೆ.
ಒನ್ ಕ್ಲಾಸ್, ಒನ್ ಚಾನೆಲ್ (ಒಂದು ವರ್ಗ, ಒಂದು ಚಾನೆಲ್) ಯೋಜನೆಯ ಹೆಸರಿನಲ್ಲಿ ಇದನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
"ಬಹಳಷ್ಟು ಶಾಲೆಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೂ, ಪ್ರತಿಯೊಬ್ಬರೂ ಡಿಜಿಟಲ್ ಜಗತ್ತಿಗೆ ಸರಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಸದಾ ಸರ್ಕಾರವನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂಥದ್ದೊಂದು ಕಾರ್ಯ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜತೆಗೆ ಮಕ್ಕಳು ಮನೆಯಲ್ಲಿ ಅಧ್ಯಯನ ನಡೆಸುವ ಬದಲು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಉಂಟಾಗುವ ಪರಿಣಾಮ ಕೂಡ ಭೀಕರವಾಗಿದ್ದು, ಅವರನ್ನುಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅವಶ್ಯಕತೆ ಇದೆ. ಆದ್ದರಿಂದಲೇ ಈ ಯೋಚನೆ ಎಂದಿದೆ ಕೇಂದ್ರ ಸರ್ಕಾರ.
ಇಂಟರ್ನೆಟ್ ಬಳಕೆ ಇಲ್ಲದ ಕಡೆಗಳಲ್ಲಿಯೂ ಮಕ್ಕಳಿಗೆ ಇದರ ಅನುಕೂಲ ತಲುಪಬೇಕೆಂದರೆ ಅದಕ್ಕಿರುವ ಒಂದೇ ಮಾರ್ಗ ದೂರದರ್ಶನ. ಆದ್ದರಿಂದ ಇದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಉಚಿತವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಯೊಂದು ಚಾನೆಲ್‌ನಲ್ಲಿ ಏನೇನು ವಿಷಯ ಇರ ಬೇಕೆಂದು ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. 1ರಿಂದ 12ನೇ ತರಗತಿಗೆ ಮೀಸಲಾಗಿರುವ ಈ ಚಾನೆಲ್‌ಗಳು ಉಚಿತವಾಗಿರಲಿದ್ದು, ಇವು ಆರಂಭವಾದ ಬಳಿಕ ಕೇಬಲ್ ಆಪರೇಟರ್‌ಗೆ ತಿಳಿಸಿ ಸಂಪರ್ಕ ಪಡೆಯಬಹುದಾಗಿದೆ. (ಏಜೆನ್ಸೀಸ್)