ಮದ್ಯಕ್ಕೆ ಇನ್ಮುಂದೆ ಆಧಾರ್​ ಕಡ್ಡಾಯ, ವಾರಕ್ಕೆರಡೇ ದಿನ ಖರೀದಿ- ಇದು ಹೈಕೋರ್ಟ್​ ತೀರ್ಪು

04052020 Raichur Liquor Stores Open
Published on

ಚೆನ್ನೈ: ಲಾಕ್​ಡೌನ್​ ಅವಧಿಯಲ್ಲಿ ಮುಚ್ಚಿದ್ದ ಮದ್ಯದಂಗಡಿಗಳನ್ನು ಇದೀಗ ಬಹುತೇಕ ರಾಜ್ಯಗಳಲ್ಲಿ ತೆರೆಯಲಾಗಿದೆ. ಎಣ್ಣೆಪ್ರಿಯರು ಇದರಿಂದ ಸಂಪೂರ್ಣ ತೃಪ್ತರಾಗಿದ್ದರೆ, ಹಲವು ಕುಟುಂಬಗಳ ಗೋಳು ಹೇಳತೀರದು.

ಅದೇ ಇನ್ನೊಂದೆಡೆ, ಮದ್ಯ ಖರೀದಿಗೆ ಮುಗಿಬಿದ್ದು, ಸಾಮಾಜಿಕ ಅಂತರ ಕಾಪಾಡದೇ ಕರೊನಾ ವೈರಸ್​ ಹರಡುವಲ್ಲಿ ಇವರ ಪಾಲು ದೊಡ್ಡದಿದೆ ಎನ್ನುವ ಭಯ. ಯಾರು ಏನೇ ಗೋಳಾಡಿದರೂ ರಾಜ್ಯ ಸರ್ಕಾರಗಳು ಪುನಃ ಮದ್ಯದಂಗಡಿ ಬಂದ್​ ಮಾಡಲು ಸುತರಾಂ ಒಪ್ಪುತ್ತಿಲ್ಲ. ಆದ್ದರಿಂದ ಬೇರೆ ದಾರಿ ಕಾಣದೇ ಮದ್ಯವಿರೋಧಿಗಳು ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ.

ಮದ್ಯದಂಗಡಿ ತೆರೆದಿದ್ದನ್ನು ಪ್ರಶ್ನಿಸಿ ಇದಾಗಲೇ ಸುಪ್ರೀಂಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ ಅಂಗಡಿ ಮುಚ್ಚುವಂತೆ ತಾನು ಆದೇಶ ಹೊರಡಿಸುವುದಿಲ್ಲ ಎಂದು ಕೋರ್ಟ್​ ಹೇಳಿಬಿಟ್ಟಿದೆ. ಮನೆ ಬಾಗಿಲಿಗೇ ಮದ್ಯದ ಪೂರೈಕೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಅದು ಹೇಳಿದೆ.

ಅದರ ಬೆನ್ನಲ್ಲೇ ಇದೀಗ ಮದ್ರಾಸ್​ ಹೈಕೋರ್ಟ್​ ಮದ್ಯದ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದೆ. ಹೈಕೋರ್ಟ್​ ಕೂಡ ತಾನು ಅಂಗಡಿ ತೆರೆದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಸೋಂಕು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್​ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಅನ್ವಯ ಇನ್ನುಮುಂದೆ ತಮಿಳುನಾಡಿನಲ್ಲಿ ಇನ್ನುಮುಂದೆ ಮದ್ಯವನ್ನು ಖರೀದಿಸಿದಾಗ ಬಿಲ್​ ಪಡೆಯುವ ವೇಳೆ ಹೆಸರಿನ ಜತೆ ಆಧಾರ್​ ಕಡ್ಡಾಯವಾಗಿ ನಮೂದಿಸಬೇಕು. ಅಷ್ಟೇ ಅಲ್ಲದೇ, ವಾರಕ್ಕೆ ಎರಡು ದಿನಗಳು ಮಾತ್ರ ಅಂದರೆ ಮೂರು ದಿನಗಳ ಅಂತರದಲ್ಲಿ ಮಾತ್ರ ಮದ್ಯ ಖರೀದಿ ಮಾಡಬೇಕು ಎಂದಿದೆ.

ಆಧಾರ್​ ನಂಬರ್​ ನೀಡುವ ಹಿನ್ನೆಲೆಯಲ್ಲಿ, ವಾರಕ್ಕೆ ಎರಡಕ್ಕಿಂತ ಹೆಚ್ಚಿನ ಬಾರಿ ಒಬ್ಬನೇ ವ್ಯಕ್ತಿ ಮದ್ಯ ಖರೀದಿಗೆ ಹೋದರೆ ಸಿಕ್ಕಿಬೀಳುವುದು ಗ್ಯಾರೆಂಟಿ. ಆದ್ದರಿಂದ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರ್ಟ್​ ಹೇಳಿದೆ. ಇದರ ಜತೆಗೆ, ನಗದು ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದಿರುವ ಹೈಕೋರ್ಟ್​, ಡಿಜಿಟಲ್​ ಪೇಮೆಂಟ್​ ವ್ಯವಸ್ಥೆ ಇಲ್ಲದ ಗ್ರಾಹಕರ ಬಳಿ ಮಾತ್ರ ನಗದು ಪಡೆಯಬಹುದಾಗಿದೆ ಎಂದಿದೆ.

ಸಾಮಾಜಿಕ ಅಂತರ ಸೇರಿದಂತೆ ಲಾಕ್​ಡೌನ್​ ಸಮಯದಲ್ಲಿ ವಿಧಿಸಲಾಗಿರುವ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಮದ್ಯದಂಗಡಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ತೆರೆದಿಡಬೇಕು, ಗುಂಪು ಸೇರಬಾರದು, ಟೋಕನ್​ ಸಿಸ್ಟಮ್​ ಜಾರಿಗೆ ತರಬೇಕು ಸೇರಿದಂತೆ ಕೆಲವು ನಿಯಮಾವಳಿಗಳನ್ನು ಕೋರ್ಟ್​ ರೂಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net