

ಜಮ್ಮು: ಶತ್ರುರಾಷ್ಟ್ರ ಪಾಕಿಸ್ತಾನ ಭಾರತದ ಗಡಿ ಪ್ರದೇಶದಲ್ಲಿ ಮತ್ತೊಮ್ಮೆ ಕದನವಿರಾಮವನ್ನು ಉಲ್ಲಂಘಿಸಿದ್ದು, ಆ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್ ಪ್ರದೇಶದಲ್ಲಿ ಮಂಗಳವಾರ ಅಪ್ರಚೋದಿತವಾಗಿ ಕದನವಿರಾಮ ಉಲ್ಲಂಘಿಸಿರುವ ಪಾಕ್, ಭಾರತದ ಯುದ್ಧನೆಲೆಯತ್ತ ಗುಂಡುಗಳನ್ನು ಹಾರಿಸಿದೆ.
ಪೂಂಚ್ನ ಮಂಕೋಟೆ ಸೆಕ್ಟರ್ನ ಎಲ್ಒಸಿ ಉದ್ದಕ್ಕೂ ಬೆಳಗಿನ ಜಾವ 4.30ರ ಸಮಯದಲ್ಲಿ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದೆ. ಆದರೆ ಅದಕ್ಕೆ ಭಾರತೀಯ ಯೋಧರು ತಕ್ಕ ಪ್ರತೀಕಾರ ಕೈಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಕರ್ನಲ್ ದೇವೆಂದರ್ ಆನಂದ್ ತಿಳಿಸಿದ್ದಾರೆ.
ಈ ವರ್ಷಾರಂಭದಿಂದಲೂ ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬಂದಿರುವ ಪಾಕ್, ಇದುವರೆಗೆ 3186 ಸಲ ಕದನವಿರಾಮ ಉಲ್ಲಂಘಿಸಿದೆ. ಪರಿಣಾಮ 24 ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. (ಏಜೆನ್ಸೀಸ್)