

Lunar Eclipse: ಇದೇ ಸೆ.7ರಂದು ಆಗಸದಲ್ಲಿ ಗೋಚರಿಸುವ ರಕ್ತ ಚಂದ್ರ ಗ್ರಹಣಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಬಗ್ಗೆ ಜನರು ತೀವ್ರ ಕುತೂಹಲ ಹೊಂದಿದ್ದಾರೆ. ಭಾದ್ರಪದ ಪೌರ್ಣಮಿಯ ದಿನದಂದು ರಾಹುವಿನ ಕಾರಣದಿಂದಾಗಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಷ್ಟಕ್ಕೂ, ಗ್ರಹಣದ ಆರಂಭ ಮತ್ತು ಅಂತ್ಯ ಸಮಯ ಯಾವಾಗ? ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.
ರಕ್ತ ಚಂದಿರನ ಆಗಮನದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಈ ದಿನದಂದು ನಮಗೆ ಅಥವಾ ನಮ್ಮ ಕುಟುಂಬದವರಿಗೆ ಏನಾದರೂ ಅಪಾಯ ಅಥವಾ ದುರ್ಘಟನೆ ಸಂಭವಿಸುತ್ತದೆ ಎಂಬ ಭಯ ಕಾಡುತ್ತದೆ. ಆದರೆ, ವಿದ್ವಾಂಸರ ಪ್ರಕಾರ, ಅಂತಹದ್ದೇನೂ ಆಗುವುದಿಲ್ಲ ಎನ್ನುತ್ತಾರೆ. ಈಗ, ಪ್ರತಿ ವರ್ಷ ಎರಡು ಚಂದಿರ ಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಗೋಚರಿಸುತ್ತವೆ.
ಇದು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಎಂಬುದು ಗಮನಾರ್ಹ. ಈ ಚಂದ್ರಗ್ರಹಣವು ನಮ್ಮ ದೇಶದಲ್ಲಿಯೂ ಗೋಚರಿಸುತ್ತದೆ. ಇದಲ್ಲದೆ, ಈ ಗ್ರಹಣವು ಆಧ್ಯಾತ್ಮಿಕ ಪರಿಭಾಷೆಯಲ್ಲಿಯೂ ವಿಶೇಷ ಮಹತ್ವವನ್ನು ಹೊಂದಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ನಮ್ಮ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲ್ಮೈಯಲ್ಲಿ ಬೀಳುತ್ತದೆ. ಚಂದ್ರನು ಭೂಮಿಯ ನೆರಳಿನಲ್ಲಿ ಸಾಗುವಾಗ, ಅದು ತನ್ನ ಸಾಮಾನ್ಯ ಪ್ರಕಾಶಮಾನವಾದ, ಬಿಳಿ ಹೊಳಪಿನಿಂದ ಮಸುಕಾಗಲು ಪ್ರಾರಂಭಿಸುತ್ತದೆ ಮತ್ತು ಕೆಂಪು ಬಣ್ಣವನ್ನು ಪಡೆಯುತ್ತದೆ. ಹೀಗಾಗಿ ಅದಕ್ಕೆ “ರಕ್ತ ಚಂದ್ರ” ಎಂಬ ಹೆಸರು ಬಂದಿದೆ. ಅಂದಹಾಗೆ, ಚಂದ್ರನ ಕೆಂಪು ಬಣ್ಣವು ರೇಲೀ ಸ್ಕ್ಯಾಟರಿಂಗ್ನ ಪರಿಣಾಮವಾಗಿದೆ. ಅಂದರೆ, ಗ್ರಹಣ ಪ್ರಕ್ರಿಯೆಯಿಂದ ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ.
ವೇಳೆ ಸೂರ್ಯನ ನೀಲಿ ಮತ್ತು ನೇರಳೆ ಸೇರಿದಂತೆ ಮುಂತಾದ ಕಡಿಮೆ ತರಂಗಾಂತರಗಳು ಚದುರಿ ಹೋಗುತ್ತವೆ ಆದರೆ, ಕೆಂಪು ಮತ್ತು ಕಿತ್ತಳೆ ಮುಂತಾದ ದೀರ್ಘ ತರಂಗಾಂತರಗಳು ಚಂದ್ರನ ಕಡೆಗೆ ಬಾಗುತ್ತವೆ. ಇದರಿಂದ ಚಂದ್ರನ ಮೇಲೆ ಕಡುಗೆಂಪು ಬಣ್ಣ ಸೃಷ್ಟಿಯಾಗುತ್ತದೆ. ಈ ನಿರ್ದಿಷ್ಟ ಚಂದ್ರಗ್ರಹಣವು ದೀರ್ಘವಾದ ಅಥವಾ ಸಂಪೂರ್ಣ ಹಂತವನ್ನು ಹೊಂದಲಿದೆ. ಇದು ಖಗೋಳದಲ್ಲೇ ಅಪರೂಪದ ದೃಶ್ಯವಾಗಿದ್ದು, ಖಗೋಳ ವೀಕ್ಷಕರಿಗೆ ರಕ್ತಸಿಕ್ತ ಕೆಂಪು ಚಂದ್ರನನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಸಮಯ ಇರುತ್ತದೆ. ಏಕೆಂದರೆ, ಗ್ರಹಣದ ಉದ್ದಕ್ಕೂ ಚಂದ್ರನ ಬಣ್ಣ ಕ್ರಮೇಣ ಬದಲಾಗುತ್ತಾ ಸಾಗುತ್ತದೆ.
ಭಾನುವಾರ ರಾತ್ರಿ 9.58ಕ್ಕೆ ಗ್ರಹಣ ಆರಂಭವಾಗಲಿದ್ದು, ಆ ರಾತ್ರಿ 11.42ಕ್ಕೆ ಸಂಪೂರ್ಣ ರಕ್ತ ಚಂದಿರ ಗೋಚರಿಸಲಿದೆ. ಗ್ರಹಣ ಬೆಳಗಿನ ಜಾವ 1.26ಕ್ಕೆ ಕೊನೆಗೊಳ್ಳಲಿದೆ. ಸುಮಾರು 3 ಗಂಟೆ 48 ನಿಮಿಷಗಳ ಕಾಲ ಈ ಗ್ರಹಣ ಇರುತ್ತದೆ. ಇದನ್ನು ರಾಹು ಗ್ರಸ್ತ ಚಂದ್ರಗ್ರಹಣ ಎಂದೂ ಕರೆಯುತ್ತಾರೆ. ಚಂದ್ರನು ರಾಹು ಜತೆ ಸೇರಿದಾಗ ಸಂಭವಿಸುವ ಚಂದ್ರಗ್ರಹಣವಾಗಿರುವುದರಿಂದ, ಪೂರ್ವಾಭಾದ್ರ ನಕ್ಷತ್ರ ಹೊಂದಿರುವವರು ಮಂತ್ರಗಳನ್ನು ಪಠಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ,(ಏಜೆನ್ಸೀಸ್).