ಇದೆಂಥಾ ಆಶ್ಚರ್ಯ! ಕದ್ದ ಹುಂಡಿ 1 ತಿಂಗಳಲ್ಲೇ ದೇಗುಲದಲ್ಲಿ ಪ್ರತ್ಯಕ್ಷ​; ಪತ್ರದಲ್ಲಿತ್ತು ಕಳ್ಳರ ಅಳಲು | Stolen Hundi

ವಿಜಯವಾಣಿ (25)
Published on

Stolen Hundi: ಕಳೆದ ತಿಂಗಳಷ್ಟೇ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದೇಗುಲವೊಂದರಲ್ಲಿ ಹುಂಡಿ ಕಳ್ಳತನ ಮಾಡಿದ್ದ ಕಳ್ಳರು, ಕದ್ದ ಜಾಗದಲ್ಲೇ ಒಂದು ತಿಂಗಳ ಬಳಿಕ ಹುಂಡಿಯನ್ನು ತಂದಿಟ್ಟಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಅಚ್ಚರಿಗೆ ದೂಡಿದೆ. ಇದೊಂದು ಪವಾಡವೇ ಸರಿ ಎಂದು ಜನರು ಹೇಳುತ್ತಿದ್ದಾರೆ.

ಕಳ್ಳರು ದೇವಸ್ಥಾನದಿಂದ ಕದ್ದ ಹಣದ ಹುಂಡಿಯನ್ನು, ಅದೇ ದೇವಸ್ಥಾನದಲ್ಲಿ ಇಟ್ಟು ತೆರಳಿದ್ದಾರೆ. ಇಲ್ಲಿಯೂ ಖದೀಮರು ಯಾರ ಕೈಗೂ ಸಿಕ್ಕಿಲ್ಲ. ಕೇವಲ ಹುಂಡಿಯನ್ನು ಮಾತ್ರ ಬಿಟ್ಟು ಹೋಗದ ಕಳ್ಳರು, ಅದರೊಂದಿಗೆ ಒಂದು ಪತ್ರವನ್ನೂ ಬಿಟ್ಟು ಹೋಗಿರುವುದು ಹಲವರ ಕುತೂಹಲ ಕೆರಳಿಸಿತು. ಬುಕ್ಕರಾಯ ಸಮುದ್ರದಲ್ಲಿರುವ ಮುಸಲಮ್ಮ ದೇವಸ್ಥಾನದಲ್ಲಿ ಕದ್ದ ಹುಂಡಿಯಲ್ಲಿ ಹಣವನ್ನು ದೋಚದ ಕಳ್ಳರು, ಯಾಕಾಗಿ ತಾವು ವಾಪಾಸ್​ ತಂದಿಟ್ಟಿದ್ದೇವೆ ಎಂಬ ಕಾರಣವನ್ನು ಪತ್ರದಲ್ಲಿ ತಿಳಿಸಿದ್ದಾರೆ.

ಹುಂಡಿಯಲ್ಲಿತ್ತು 1 ಲಕ್ಷ ರೂ.

ಕಳ್ಳತನವಾಗಿದ್ದ ಹುಂಡಿ ಒಂದು ತಿಂಗಳ ಬಳಿಕ ಅದೇ ಜಾಗದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಪೊಲೀಸರನ್ನು ಒಂದು ನಿಮಿಷ ಆಶ್ಚರ್ಯಚಕಿತರನ್ನಾಗಿ ಮಾಡಿತು. ಈ ವೇಳೆ ದೇವಸ್ಥಾನದ ಹಿರಿಯರು, ಪೊಲೀಸರ ಸಮ್ಮುಖದಲ್ಲಿ ಹಣವನ್ನು ಎಣಿಸಿದರು. ಹುಂಡಿಯಲ್ಲಿ ಒಂದು ಲಕ್ಷ ರೂ. ಇತ್ತು. ಅಲ್ಲಿಗೆ ಕಳ್ಳರು ಭಾರೀ ಪ್ರಮಾಣದ ಹಣವನ್ನು ಮುಟ್ಟಿಲ್ಲ ಎಂಬುದು ಖಾಕಿಗೆ ಸ್ಪಷ್ಟವಾಯಿತು.

ಪತ್ರದಲ್ಲಿ ಹೇಳಿರುವುದೇನು?

ದೇವಸ್ಥಾನದಲ್ಲಿ ಕದ್ದ ಹುಂಡಿಯನ್ನು ವಾಪಾಸ್​ ತಂದಿಡಲು ಕಾರಣವನ್ನು ವಿವರಿಸಿರುವ ಕಳ್ಳರು, ಈ ಹುಂಡಿಯ ಹಣವನ್ನು ಕದ್ದ ಕೆಲವೇ ದಿನಗಳಲ್ಲಿ ನಮ್ಮ ಮಕ್ಕಳು ಅನಾರೋಗ್ಯಕ್ಕೆ ಒಳಗಾದರು. ಈ ವೇಳೆ ಹುಂಡಿಯಲ್ಲಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಮಕ್ಕಳ ಚಿಕಿತ್ಸೆ ವೆಚ್ಚಕ್ಕೆ ಬಳಸಿಕೊಂಡೆವು ಎಂದು ಉಲ್ಲೇಖಿಸಿದ್ದಾರೆ. ಅದರಲ್ಲೂ, ಹುಂಡಿಯಲ್ಲಿ ಎಷ್ಟು ಹಣವಿತ್ತು? ತಾವು ಬಳಿಸಿಕೊಂಡಿದ್ದೆಷ್ಟು? ಎಂಬುದರ ಲೆಕ್ಕವನ್ನು ಸಹ ತಿಳಿಸಿದ್ದಾರೆ. ಈ ಪತ್ರ ನೋಡುತ್ತಿದ್ದಂತೆ ಇಡೀ ಗ್ರಾಮಸ್ಥರು, ಇದೆಲ್ಲವೂ ನಮ್ಮ ದೇವರ ಪವಾಡ ಎಂದು ಕೈಮುಗಿದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net