ನಾವು ಲವ್​ ಮ್ಯಾರೇಜ್​ ಆಗೋಲ್ಲ: ಪ್ರೇಮಿಗಳ ದಿನದಂದೇ ವಿದ್ಯಾರ್ಥಿನಿಯರಿಂದ ಇದೆಂಥಾ ಪ್ರತಿಜ್ಞೆ?

love marriage
Published on

ಅಮರಾವತಿ: ನಿನ್ನೆ ಪ್ರೇಮಿಗಳ ದಿನವನ್ನು ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಆದರೆ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಮಹಿಳಾ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರೆಲ್ಲರು ತಾವು ಪ್ರೀತಿಸಿ ಮದುವೆಯಾಗುವುದಿಲ್ಲ, ಯಾವುದೇ ಕಾರಣಕ್ಕೂ ಪ್ರೀತಿಯ ಬಲೆಯಲ್ಲಿ ಬೀಳುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಅಮರಾವತಿಯ ಚಂದೂರ್​ನಲ್ಲಿರುವ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೆಲ್ಲರೂ ನಿನ್ನೆ ಪ್ರತಿಜ್ಞೆ ಮಾಡಿದ್ದಾರೆ. "ನಾನು ಯಾವುದೇ ಕಾರಣಕ್ಕೂ ಪ್ರೀತಿಯಲ್ಲಿ ಬೀಳುವುದಿಲ್ಲ. ಪ್ರೇಮ ವಿವಾಹವಾಗುವುದಿಲ್ಲ." ಎಂದು ಮರಾಠಿ ಭಾಷೆಯಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.

ಈ ವಿಶೇಷ ಪ್ರತಿಜ್ಞೆಯ ಕುರಿತಾಗಿ ಮಾತನಾಡಿರುವ ವಿದ್ಯಾರ್ಥಿಗಳು, "ನಮಗೆ ನಮ್ಮ ತಂದೆ ತಾಯಿಯಲ್ಲಿ ಅಪಾರ ನಂಬಿಕೆಯಿದೆ. ಅವರು ನಮಗೆ ಯಾವ ರೀತಿಯ ಜೀವನ ಸಂಗಾತಿ ಬೇಕು ಎನ್ನುವುದನ್ನು ಆಯ್ಕೆ ಮಾಡುತ್ತಾರೆ. ಪ್ರೇಮ ವಿವಾಹದ ಅವಶ್ಯಕತೆ ನಮಗಿಲ್ಲ" ಎಂದು ತಿಳಿಸಿದ್ದಾರೆ.

ಕಾಲೇಜು ಪ್ರಾಂಶುಪಾಲರು ಮತ್ತು ಅಧ್ಯಾಪಕರ ಸಮ್ಮುಖದಲ್ಲೇ ವಿದ್ಯಾರ್ಥಿನಿಯರು ಈ ಪ್ರತಿಜ್ಞೆ ಮಾಡಿದ್ದು ಇದರ ಹಿಂದೆ ಬಲವಾದ ಕಾರಣವೊಂದಿದೆ ಎನ್ನಲಾಗಿದೆ. ಇತ್ತೀಚೆಗೆ ವಾರ್ಧಾ ಜಿಲ್ಲೆಯ ಹಿಂಗಾಂಘಾಟ್​ನಲ್ಲಿ 24 ವರ್ಷದ ಪ್ರಾಧ್ಯಾಪಕಿಯೊಬ್ಬರಿಗೆ ಬೆಂಕಿ ಹಚ್ಚಿ ಸಾಯಿಸಲಾಗಿತ್ತು. ಆಕೆಯ ಪ್ರಿಯತಮನೇ ಆಕೆಯನ್ನು ಕೊಂದಿರುವುದಾಗಿ ವರದಿಯಾಗಿತ್ತು. ಇದರಿಂದ ಮನನೊಂದ ಕಾಲೇಜು ಆಡಳಿತ ಮತ್ತು ವಿದ್ಯಾರ್ಥಿನಿಯರು ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net