ಹಸೆಮಣೆ ಏರಿದ ಕೆಲವೇ ನಿಮಿಷಗಳ ನಂತರ ವರನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಎಕ್ಸಾಮ್​​ ಬರೆದ ವಧು

The bride went to the exam center with the groom and wrote the exam
Published on

ಶಿವಮೊಗ್ಗ: ಚೆನ್ನೈ ಮೂಲದ ಯುವಕನನ್ನು ಪ್ರೀತಿಸಿ, ಕುಟುಂಬದ ಹಿರಿಯರನ್ನು ಒಪ್ಪಿಸಿ ವಿವಾಹವಾದ ನವವಧು ಹಸೆಮಣೆ ಏರಿದ ಕೆಲವೇ ನಿಮಿಷಗಳಲ್ಲಿ ವರನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಅರ್ಥಶಾಸ್ತ್ರ ಪರೀಕ್ಷೆ ಬರೆದು ಪುನಃ ಮನೆಗೆ ತೆರಳಿದ್ದಾರೆ.

ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ಪರೀಕ್ಷೆಗಳು ನಡೆದಿದ್ದವು. ವಿದ್ಯಾರ್ಥಿನಿ ಬಿ.ಸತ್ಯವತಿ ಕೂಡ ಬಿಎ ಅಂತಿಮ ವರ್ಷದ ಅರ್ಥಶಾಸ್ತ್ರ ಪರೀಕ್ಷೆ ಬರೆಯಬೇಕಿತ್ತು. ಆದರೆ ಮದುವೆ ಇದ್ದರೂ ಪರೀಕ್ಷೆ ಬರೆಯುವ ಬಗ್ಗೆ ಕುಟುಂಬದವರನ್ನು ಒಪ್ಪಿಸಿದ್ದರು. ಭರ್ಮಪ್ಪ ನಗರದ ಸತ್ಯವತಿ, ಚೆನ್ನೈ ಮೂಲದ ಪ್ರಿಯಕರ ಫ್ರಾನ್ಸಿಸ್ ಎಂಬಾತನೊಂದಿಗೆ ಭಾನುವಾರ ಬೆಳಗ್ಗೆ ಸರಳ ವಿವಾಹ ನೆರವೇರಿತ್ತು. ಹಸೆಮಣೆ ಏರಿದ ಮರುಕ್ಷಣವೇ ನವವಧು ನೇರವಾಗಿ ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾಳೆ.

ಬೆಳಗ್ಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವವಧು ಸತ್ಯವತಿ, ಬೈಕ್‌ನಲ್ಲಿ ಹೂವಿನ ಹಾರ, ಆಭರಣಗಳ ಸಹಿತ ಪತಿಯೊಂದಿಗೆ ಮದುವೆ ಮಂಟಪದಿಂದ ಎದ್ದು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಮದುವೆಗಾಗಿ ಅಲಂಕಾರಗೊಂಡಿದ್ದ ಸತ್ಯವನ್ನು ಕಂಡ ಸ್ನೇಹಿತರೆ ಅಚ್ಚರಿಗೆ ಒಳಗಾಗುವ ಜತೆಗೆ ಮದುವೆ ಶುಭಾಶಯವನ್ನು ಕೋರಿದರು. ನವವಧುವಿನ ನಿರ್ಧಾರವನ್ನು ಸಹಪಾಠಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಕೂಡ ಪ್ರಶಂಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಫ್ರಾನ್ಸಿಸ್, ಸತ್ಯವತಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ. ಇನ್​ಸ್ಟಾಗ್ರಾಮ್​​ ಮೂಲಕವಾಗಿ ಪರಿಚಿತರಾಗಿ ಎರಡು ವರ್ಷ ಪರಸ್ಪರ ಸಂದೇಶ ರವಾನಿಸುತ್ತಾ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಹಿರಿಯರನ್ನು ಒಪ್ಪಿಸಿ ಪ್ರೇಮಿಗಳಿಬ್ಬರು ಸರಳ ವಿವಾಹವಾಗಿರುವುದು ಕೂಡ ಹಲವರ ಮೆಚ್ಚುಗೆಗೆ ಪಾತ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net