ಮದ್ವೆಯಾದ ದಿನವೇ ನವದಂಪತಿ ಮಾರಾಮಾರಿ

marreage
ನಿಖಿತಶ್ರೀ ಮತ್ತು ನವೀನ್​ ಕುಮಾರ್​
Published on

ಕೋಲಾರ /ಕೆಜಿಎಫ್​: ಬುಧವಾರ ಬೆಳಗ್ಗೆ ಮದುವೆಯಾದ ನವದಂಪತಿ ಸಂಜೆ ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿಕೊಂಡ ಪರಿಣಾಮ ವಧು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಹಲ್ಲೆಗೊಳಗಾಗಿರುವ ವರನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಬೈನೇಹಳ್ಳಿಯ ಶ್ರೀನಿವಾಸಲು-ಲಕ್ಷ್ಮಿ ದಂಪತಿ ಪುತ್ರಿ ನಿಖಿತಶ್ರೀ (18) ಮೃತೆ. ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ಮುನಿಯಪ್ಪ ಅವರ ಪುತ್ರ ನವೀನ್​ಕುಮಾರ್​(30) ತೀವ್ರ ಹಲ್ಲೆಗೊಳಗಾಗಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ.

ನಿಖಿತಶ್ರೀ ಮತ್ತು ನವೀನ್​ಕುಮಾರ್​ಗೆ ಚಂಬರಸನಹಳ್ಳಿಯ ವರನ ಅಕ್ಕನ ಮನೆಯಲ್ಲಿ ಬುಧವಾರ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ತಂದೆ, ತಾಯಿ ಮತ್ತು ವಧುವಿನ ತಂದೆ, ತಾಯಿ ಹಾಗೂ ಕೆಲವು ಸಂಬಂಧಿಕರು ಭಾಗವಹಿಸಿದ್ದರು ಎನ್ನಲಾಗಿದೆ. ಮದುವೆ ನಂತರ ಅದೇ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ಹೋದ ನೂತನದಂಪತಿ ಕೋಣೆಯ ಬಾಗಿಲು ಹಾಕಿಕೊಂಡು ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಆಗ ತೀವ್ರ ಗಾಯಗೊಂಡಿದ್ದ ಇಬ್ಬರನ್ನೂ ಚಿಕಿತ್ಸೆಗೆಂದು ಕೆಜಿಎಫ್​ನ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತಾದರೂ, ನಿಖಿತಶ್ರೀ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ತೀವ್ರ ಗಾಯಗೊಂಡಿದ್ದ ನವೀನ್​ಕುಮಾರ್​ನನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಕೆಜಿಎಫ್​ ಪೊಲೀಸ್​ ವರಿಷ್ಠಾಧಿಕಾರಿ ಶಾಂತರಾಜು, ಡಿವೈಎಸ್​ಪಿ ಪಾಂಡುರಂಗ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಂಡರ್​ಸನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net