

ಶಿವಮೊಗ್ಗ: ಪಟ್ಟಣದ ಬಂಗಾರಧಾಮದಲ್ಲಿ ಎಸ್.ಬಂಗಾರಪ್ಪ ಫೌಂಡೇಷನ್, ಬೆಂಗಳೂರಿನ ಎಸ್.ಬಂಗಾರಪ್ಪ ವಿಚಾರ ವೇದಿಕೆಯಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 92ನೇ ಜನ್ಮದಿನೋತ್ಸವದ ಅಂಗವಾಗಿ ಅ.26ರಂದು ಸಂಜೆ4ಕ್ಕೆ ನಮನ-ಚಿಂತನ-ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯ್ಕ ಹೇಳಿದರು.
ಶೋಷಿತ ಸಮುದಾಯಗಳ ಧ್ವನಿ ಬಂಗಾರಪ್ಪ. ರಾಜ್ಯ ಕಂಡ ಬಹುದೊಡ್ಡ ಸಮಾಜವಾದಿ ಚಿಂತಕ, ಸಾಂಸ್ಕೃತಿಕ ವಕ್ತಾರರೂ ಆಗಿದ್ದಾರೆ. ಪ್ರತಿ ವರ್ಷ ಅವರ ಜನ್ಮದಿನ ಆಯೋಜಿಸಲಾಗುತ್ತಿದೆ. ವಿಚಾರ ಸಂಕಿರಣ, ಸಮಾರಂಭದ ಜತೆಗೆ ಬಂಗಾರಪ್ಪ ಹೆಸರಿನಲ್ಲಿ ಬಂಗಾರ ಪ್ರಶಸ್ತಿ ನೀಡುತ್ತಿದ್ದೇವೆ. ಒಂದು ಲಕ್ಷ ರೂ. ನಗದು ಮತ್ತು ಫಲಕದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6ಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಬಂಗಾರ ಪ್ರಶಸ್ತಿ ಪ್ರದಾನ ಮಾಡುವರು. ನಟ ಶಿವರಾಜಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವರು. ಎಸ್.ಬಂಗಾರಪ್ಪ ಫೌಂಡೇಶನ್ ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ, ಬಂಗಾರಪ್ಪ ಅವರ ಒಡನಾಡಿ ಬಸಪ್ಪ ಅಂಕರವಳ್ಳಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ ಉಪಸ್ಥಿತರಿರುವರು ಎಂದರು.
ಅ.26ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಬಂಗಾರಪ್ಪ ಸಮಾಜವಾದಿ ಚಿಂತನೆಗಳು, ಇಂದಿನ ಪ್ರಸ್ತುತತೆ ಕುರಿತು ಪ್ರೊ. ಎಲ್.ಎಸ್.ಮುಕುಂದರಾಜ್, ಸಿರಾಜ್ ಅಹ್ಮದ್ ಹಾಗೂ ರವಿಕುಮಾರ್ ವಿಚಾರ ಮಂಡಿಸುವರು. ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಎಸ್.ಬಂಗಾರಪ್ಪ ಅಭಿಮಾನಿಗಳು, ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಸಂಜೆ 5ಕ್ಕೆ ರಾಜಕುಮಾರ್ ರಂಗಮಂದಿರದಿಂದ ಬಂಗಾರಧಾಮದವರೆಗೆ ನೂರಾರು ಜಾನಪದ ಕಲಾವಿದರೊಂದಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾಜಸೇವೆ ಕ್ಷೇತ್ರದಲ್ಲಿ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಅವರಿಗೆ ಸೇವಾ ಬಂಗಾರ, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಸಾಹಿತ್ಯ ಬಂಗಾರ, ರಂಗಭೂಮಿ ಸೇವೆ ಕ್ಷೇತ್ರದಲ್ಲಿ ಗ್ರಾಮೀಣ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್ ಅವರಿಗೆ ರಂಗ ಬಂಗಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರಿಂದ ಜಾನಪದ ವೈಭವ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಮುಖಂಡರಾದ ಜಿ.ಡಿ.ಮಂಜುನಾಥ, ಶಮಂತ್ ಮತ್ತು ಮುಕುಂದಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.
ಇಂದು ಪ್ರಬಂಧ, ಚರ್ಚಾ ಸ್ಪರ್ಧೆ
ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅ.24ರಂದು ಬಂಗಾರಪ್ಪ ಅವರ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಏಳು ತಾಲೂಕುಗಳಿಂದ ತಲಾ ಮೂವರು ವಿಜೇತರಿಗೆ ಅ.26ರ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು.