ಬಿಜೆಪಿ ಸೇರಿದ ತೆರೆಯ ಮೇಲಿನ 'ರಾಮ'

ram
Published on

ನವದೆಹಲಿ : ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ವಿಚಾರದಿಂದ ಹಿಡಿದು ಜೈಶ್ರೀರಾಮ್ ಘೋಷಣೆವರೆಗೆ ರಾಮ ಜಪ ಮಾಡುವ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಶ್ರೀರಾಮನ ಕೃಪಾಕಟಾಕ್ಷ ದೊರೆದಂತಿದೆ! ಏಕೆಂದರೆ ಜನಪ್ರಿಯ ರಾಮಾಯಣ ಧಾರಾವಾಹಿಯಲ್ಲಿ ಖುದ್ದು ಭಗವಾನ್ ಶ್ರೀರಾಮನ ಪಾತ್ರ ವಹಿಸಿದ ಖ್ಯಾತಿಯ ನಟ ಅರುಣ್ ಗೋವಿಲ್ ಇದೀಗ ಬಿಜೆಪಿ ಸೇರಿದ್ದಾರೆ.

ಚಿತ್ರನಟ ಮತ್ತು ನಿರ್ಮಾಪಕರಾಗಿರುವ ಅರುಣ್ ಗೋವಿಲ್, ಹಿಂದಿ, ಭೋಜಪುರಿ, ಬ್ರಜಭಾಷಾ, ಒಡಿಯಾ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಮಾನಂದ ಸಾಗರ್​ ಅವರ ಹಿಂದಿ ಧಾರಾವಾಹಿ ರಾಮಾಯಣದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸುತ್ತಿರುವ ಗೋವಿಲ್, ಬಿಜೆಪಿ ಕೈಹಿಡಿದಿದ್ದಾರೆ.

ಭಾರತದ ನಾಲ್ಕು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಗೋವಿಲ್ ಅವರ ಸೇರ್ಪಡೆ ಬಿಜೆಪಿಯ ಸ್ಟಾರ್ ಫ್ಯಾಕ್ಟರ್​ಅನ್ನು ಹೆಚ್ಚಿಸಲಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಪ್ರಚಾರದಲ್ಲಿ ಅರುಣ್​ ಗೋವಿಲ್ ಭರಪೂರ ತೊಡಗಲಿದ್ದು, ಸುಮಾರು 100 ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net