

ಬೆಂಗಳೂರು: ಬೆಂಗಳೂರು ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಲೆಂದು ಕೇರಳಕ್ಕೆ ತೆರಳಿದ್ದರು. ಈ ಸಂದರ್ಭ ಕೇರಳದ ಕಲ್ಮಶೇರಿ ಪೊಲೀಸರು ಒಟ್ಟು, ನಾಲ್ವರು ಬೆಂಗಳೂರು ಪೊಲೀಸರನ್ನು ಅರೆಸ್ಟ್ ಮಾಡಿದ್ದಾರೆ.
ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರು, ಆರೋಪಿಗಳಿಂದ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊರಿಸಲಾಗಿದ್ದು, ಆರೋಪಿಗಳು ಕಲ್ಮಶೇರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಉದ್ಯೋಗ ಕೊಡಿಸುವುದಾಗಿ ಸಾಫ್ಟ್ವೇರ್ ಇಂಜಿನಿಯರ್ಗೆ ಮೋಸವಾಗಿದ್ದ ಹಿನ್ನೆಲೆಯಲ್ಲಿ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ತಂಡ, ಹಣದ ರಿಕವರಿಗೆಂದು ಕೇರಳಕ್ಕೆ ತೆರಳಿದ್ದರು. ಚಂದಕ್ ಶ್ರೀಕಾಂತ್ ಎಂಬುವವರು ಕೊಟ್ಟಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೇರಳಕ್ಕೆ ತೆರಳಿದ್ದು.
ಶ್ರೀಕಾಂತ್ ಎನ್ನುವವರಿಗೆ ಕೇರಳ ಮೂಲದ ಆರೋಪಿಗಳು ಆನ್ಲೈನ್ ಮೂಲಕ 26 ಲಕ್ಷ ರೂ. ಹಣ ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ವೈಟ್ಫೀಲ್ಡ್ನ ಸಿಇಎನ್ ಪೊಲೀಸರಿಗೆ ಮೊದಲಿಗೆ ಮಡಿಕೇರಿಯ ಆರೋಪಿ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ನಲ್ಲಿ 2 ಕೋಟಿ ರೂ. ಟ್ರಾನ್ಷಕ್ಷನ್ ಆಗಿರುವುದು ಪತ್ತೆಯಾಗಿದೆ.
ವೈಟ್ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗು ತಂಡ ಇದರ ಜಾಡನ್ನೇ ಹಿಡಿದು ಕೇರಳಕ್ಕೆ ಹೊರಟಿದ್ದು. ಈ ಸಂದರ್ಭ, ನೌಶಾದ್ ಎಂಬುವನಿಂದ ಆನ್ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲು ತೆರಳಿದ್ದ ಬೆಂಗಳೂರಿನ ಪೊಲೀಸರು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಪೊಲೀಸರು ತೆರಳಿದ್ದರು.
ಈ ವೇಳೆ 3 ಲಕ್ಷ ರೂ. ನೀಡುವಂತೆ ಇನ್ಸ್ಪೆಕ್ಟರ್ ಶಿವಪ್ರಕಾಶ್ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗೆಂದು ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಬೆಂಗಳೂರು ಪೊಲೀಸರು ಪ್ರಕರಣದ ತನಿಖೆಗೆಂದು ಬಂದಿರುವುದಾಗಿ ತಿಳಿಸಿದ್ದರೂ, ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆಯೇ ಕಲ್ಲಂಚೇರಿ ಪೊಲೀಸರು ಎಫ್ಐಆರ್ ದಾಖಲು ಕೂಡ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ಪೆಕ್ಟರ್ ಶಿವಪ್ರಕಾಶ್ ಹಾಗೂ ಸಿಬ್ಬಂದಿಗಳು ಕೇರಳ ಪೊಲೀಸರ ವಶದಲ್ಲೇ ಇದ್ದಾರೆ.