

ಗದಗ: ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಲೇ ಇವೆ. ಇದೀಗ ಚಲಿಸುತ್ತಿರುವ ಬಸ್ನಿಂದ ಟೈಯರ್ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಭಯಾನಕ ಘಟನೆ ವರದಿಯಾಗಿದೆ.
ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ಈ ಘಟನೆ ನಡೆದಿದೆ. ಗದಗ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್, ಗದಗದಿಂದ ನರಗುಂದದ ಕಡೆ ಹೊರಟಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬಸ್ನ ಹಿಂಬದಿಯ ಒಂದು ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿಕೊಂಡು ಹೋಗಿ ಬಿದ್ದಿದೆ.
ಬಸ್ ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ಕಳಚಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾರಿಗೆ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಬಸ್ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಭಯಭೀತರಾದರು. ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಬಸ್ನ ಹಿಂಬದಿ ಚಕ್ರ ಕಳಚಿಕೊಂಡು ಉರುಳಿ ಹೋಗ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಘಟನೆ ದೃಶ್ಯವನ್ನು ಬಸ್ನ ಹಿಂದೆ ಬರುತ್ತಿದ್ದ ಕಾರಿನಲ್ಲಿ ಇದ್ದವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬಸ್ಗಳೆಲ್ಲ ಡಕೋಟಾ ಬಸ್ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಬಸ್ಗಳು ಸಿಕ್ಕಾಪಟ್ಟೆ ರಷ್ ಆಗುತ್ತಿದ್ದು, ಇದರಿಂದ ಬಸ್ನ ಒಂದೊಂದೇ ವಸ್ತುಗಳು ಕಳಚಿಬೀಳ್ತಿವೆ. ಮಾರ್ಗಮಧ್ಯದಲ್ಲಿಯೇ ಕೆಲವು ಬಸ್ಗಳು ಕೆಟ್ಟು ನಿಲ್ಲುತ್ತಿವೆ ಎಂಬುದಕ್ಕೆ ಈ ಘಟನೆ ಒಂದು ತಾಜಾ ಉದಾಹರಣೆಯಾಗಿದೆ. (ದಿಗ್ವಿಜಯ ನ್ಯೂಸ್)