

ಶಿವಮೊಗ್ಗ: ಪದವೀಧರ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ, ನೂತನ ಶಾಖಾ ಕಟ್ಟಡದ ಲಾಕರ್ ಪ್ಲಾಜಾ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಸೆ.21ರಂದು ಸಂಜೆ 6ಕ್ಕೆ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಹೇಳಿದರು.
1971ರಲ್ಲಿ ಅನೇಕ ಹಿರಿಯರು ಸೇರಿಕೊಂಡು ಆರಂಭಿಸಿದ ಸಂಘ ಯಶಸ್ವಿಯಾಗಿ 53 ವರ್ಷ ಪೂರೈಸಿದ್ದು ಇಡೀ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೂ ಕೂಡ ಭಾಜನವಾಗಿದ್ದು ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಪಾಲ್ಗೊಳ್ಳುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರೋಪ ಸಮಾರಂಭವನ್ನು ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಲಾಕರ್ ಪ್ಲಾಜಾವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯನಾಯ್ಕ್, ಎಂಎಲ್‌ಸಿಗಳಾದ ಎಸ್.ಎಲ್.ಭೋಜೇಗೌಡ, ಮಂಜುನಾಥ್ ಭಂಡಾರಿ, ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದರು.
ಸಂಘದ ಸದಸ್ಯೆಯೂ ಆಗಿರುವ ದೀಪಿಕಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಪಿ.ರುದ್ರೇಶ್, ಎಸ್.ಎಚ್.ಪ್ರಸನ್ನ, ಎಚ್.ಸಿ.ಸುರೇಶ್, ಎಸ್.ಕೆ.ಕೃಷ್ಣಮೂರ್ತಿ, ಎಸ್.ರಾಜಶೇಖರ್, ಟಿ.ಜಗದೀಶ್, ಯು.ಚಂದ್ರಶೇಖರಪ್ಪ, ಯು.ರಮ್ಯಾ, ಡಿ.ಎಸ್.ಭುವನೇಶ್ವರಿ, ಯು.ಶಿವಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.
54.73 ಕೋಟಿ ರೂ. ಸಾಲ ವಿತರಣೆ
ಆರಂಭದಲ್ಲಿ 163 ಸದಸ್ಯರಿದ್ದ ಸಂಘವು ಪ್ರಸ್ತುತ 7,081 ಸದಸ್ಯರನ್ನು ಹೊಂದಿದೆ. 288.82 ಲಕ್ಷ ರೂ. ಶೇರು ಬಂಡವಾಳ ಹೊಂದಿದ್ದು 65.48 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಅಲ್ಲದೇ 54.73 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಎಸ್.ಪಿ.ದಿನೇಶ್ ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ ಸಾಲ ವಸೂಲಾತಿ ಅತ್ಯುತ್ತಮವಾಗಿದೆ. ಎನ್‌ಪಿಎ ಪ್ರಮಾಣ ಶೇ. 2.5 ರಷ್ಟಿದೆ. ಅದಲ್ಲದೆ ಸತತವಾಗಿ ಕಳೆದ ಆರು ವರ್ಷಗಳಿಂದ ಒಂದು ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದೆ ಎಂದರು.
ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕೃಷಿನಗರ ಬಡಾವಣೆಯಲ್ಲಿ 4 ಅಂತಸ್ತಿನ ನೂತನ ಶಾಖಾ ಕಚೇರಿ ಕಟ್ಟಡ ನಿರ್ಮಿಸಿದ್ದು ಮೊದಲ ಮಹಡಿಯಲ್ಲಿ ಲಾಕರ್ ವ್ಯವಸ್ಥೆ, ಎರಡನೇ ಮಹಡಿಯಲ್ಲಿ ಶಾಖಾ ಕಚೇರಿ, ಮೂರನೇ ಮಹಡಿಯಲ್ಲಿ ಸಭಾಂಗಣ, ನಾಲ್ಕನೇ ಮಹಡಿಯಲ್ಲಿ ಐಎಎಸ್, ಐಪಿಎಸ್ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ತೆರೆಯಲಾಗುವುದು.- ಎಸ್.ಪಿ.ದಿನೇಶ್, ಪದವೀಧರ ಸಹಕಾರ ಸಂಘದ ಅಧ್ಯಕ್ಷ