13ರಂದು ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ

8 M.T.ANNEGWODA-2
ಎಂ.ಟಿ.ಅಣ್ಣೇಗೌಡ
Published on

ಕೆ.ಆರ್.ನಗರ: ತಾಲೂಕು ಒಕ್ಕಲಿಗರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಡಿ.13ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ಹೇಳಿದರು.

ಸರ್ವ ಸದಸ್ಯರ ಸಭೆಯ ಜತೆಗೆ ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ರಷ್ಟು ಅಂಕ ಗಳಿಸಿದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರ್ಹ ವಿದ್ಯಾರ್ಥಿಗಳು ಡಿ.10ರೊಳಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಮತ್ತು ಕಾಲೇಜಿನ ಧೃಢೀಕರಣ ಪತ್ರದೊಂದಿಗೆ ಸಂಘದ ಕಾರ್ಯದರ್ಶಿ ಬಿ.ಅಣ್ಣಾಜಿಗೌಡ ಅವರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಕ್ಷೇತ್ರದಲ್ಲಿ ಈವರೆಗೆ ಚುನಾಯಿತರಾಗಿರುವ ಶಾಸಕರಲ್ಲಿ ಜನಸೇವೆ, ಅಭಿವೃದ್ಧಿ ಕೆಲಸ ಮತ್ತು ದಾನ ಮಾಡುವುದರಲ್ಲಿ ಮಾಜಿ ಶಾಸಕ ಸಾ.ರಾ.ಮಹೇಶ್ ಮೊದಲಿಗರಾಗಿದ್ದು ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದರು.

ಕೆ.ಆರ್.ನಗರ ಪಟ್ಟಣದಲ್ಲಿ ಎಲ್ಲ ಸಮುದಾಯದವರಿಗೆ ಭವನಗಳು ಇವೆ. ಆದರೆ ಒಕ್ಕಲಿಗರ ಸಮಾಜದವರಿಗೆ ಇರಲಿಲ್ಲ. ಅದನ್ನು ಮನಗಂಡು ಸಾ.ರಾ.ಮಹೇಶ್ ಅವರು ಶಾಸಕರಾಗಿದ್ದ ವೇಳೆ ಉತ್ತಮವಾದ ಭವನ ನಿರ್ಮಾಣ ಮಾಡಿಸಿಕೊಟ್ಟಿದ್ದು ಇದು ಎಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಶ್ಲಾಘಿಸಿದರು.

ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯ ವಾರ್ಷಿಕ ಮಹಾಸಭೆಗೆ ಸಂಘದ ಎಲ್ಲ ಸದಸ್ಯರು ಆಗಮಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ನಿರ್ದೇಶಕ ಎಂ.ಜೆ.ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net