

ಹನಗೋಡು : ಶತಮಾನಗಳ ಇತಿಹಾಸವುಳ್ಳ ರಾಮೇನಹಳ್ಳಿ ಬೆಟ್ಟದ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಫೆ.26 ರಿಂದ ಮಾ.1ವರೆಗೆ ಅದ್ದೂರಿಯಾಗಿ ನಡೆಯಲಿದೆ.
ಹನಗೋಡು-ಹುಣಸೂರು ಮುಖ್ಯರಸ್ತೆಯ ರಾಮೇನಹಳ್ಳಿ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿ ದಂಡೆಯ ಬೆಟ್ಟದ ಮೇಲಿನ ದೇವಾಲಯದಲ್ಲಿ ಅನಾದಿಕಾಲದಿಂದಲೂ ಪ್ರತಿ ಶಿವರಾತ್ರಿ ಹಬ್ಬದಂದು ಇಡೀ ರಾತ್ರಿ ಜಾಗರಣೆ, ಮಾರನೇ ದಿನ ಬೆಳಗ್ಗೆ ಬೆಟ್ಟದ ತಪ್ಪಲಿನಲ್ಲಿ ರಥೋತ್ಸವ ಹಾಗೂ ಪಾರೋಟೋತ್ಸವ, ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ಹಾಗೂ ಗ್ರಾಮದೊಳಗೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.
ಫೆ.26 ರಂದು ಬೆಟ್ಟದ ಮೇಲೆ ಬೆಳಗ್ಗೆ 8 ಗಂಟೆಗೆ ಕಳಸ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ರಾತ್ರಿ ವಿಶೇಷ ದೀಪಾಲಂಕಾರ ಹಾಗೂ ಹರಿಕಥೆ, ಮನರಂಜನೆ, ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ. 27ರಂದು 9.30ಗಂಟೆಯಿಂದ 10.00 ಗಂಟೆಯೊಳಗೆ ಶುಭ ಮಿನ ಲಗ್ನ ಮೂಹೂರ್ತದಲ್ಲಿ ರಥೋತ್ಸವ ಜರುಗಲಿದೆ. ಭಕ್ತರಿಂದ ಬಾಯಿ ಬೀಗ, ತಲೆಮುಡಿ ಸೇರಿದಂತೆ ಇತರ ಹರಕೆ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ, ಧಾರ್ಮಿಕ ಸಭೆ ನಡೆಯಲಿದೆ. ಫೆ.28ರಂದು ಮಹಾಪೂಜೆ, ಸಂಜೆ 4 ಗಂಟೆಗೆ ಪಾರ್ವಟೋತ್ಸವ ನಡೆಯಲಿದೆ. ಮಾರ್ಚ್ 1 ರಂದು ಸಂಜೆ 5 ಗಂಟೆಗೆ ಲಕ್ಷ್ಮಣ ತೀರ್ಥ ನದಿಯಲ್ಲಿ ತೆಪ್ಪೋತ್ಸವ ಹಾಗೂ ರಾತ್ರಿ ಗ್ರಾಮದೊಳಗೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ದೇವಾಲಯ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.