

ಜಿನೇವಾ: ಜಗತ್ತನ್ನು ಕಾಡುತ್ತಿರುವ ಕರೊನಾ ವೈರಸ್ ಪ್ರಭೇದಗಳಾದ ಡೆಲ್ಟಾ ಮತ್ತು ಒಮಿಕ್ರಾನ್ಗಳ ‘ಸುನಾಮಿ’ ಶೀಘ್ರವೇ ಜಗತ್ತನ್ನು ಅಪ್ಪಳಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಎಚ್ಚರಿಕೆ ನೀಡಿದ್ದಾರೆ.
ಸೋಂಕಿನ ಹೊಸ ಪ್ರಭೇದ ಒಮಿಕ್ರಾನ್ನಿಂದ ಸೌಮ್ಯ ಸ್ವರೂಪದ ರೋಗ ಕಾಣಿಸುತ್ತದೆ ಎಂದು ಕೇವಲ ಈಗ ಲಭ್ಯವಿರುವ ದತ್ತಾಂಶಗಳಿಂದ ಹೇಳಲು ಸಾಧ್ಯವಿಲ್ಲ ಎಂದು ಘೇಬ್ರಿಯೆಸಸ್ ಹೇಳಿದ್ದಾರೆ. ನವೆಂಬರ್ ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್, ಈಗ ಅಮೆರಿಕ ಮತ್ತು ಕೆಲವು ಐರೋಪ್ಯ ದೇಶಗಳಲ್ಲಿ ಪ್ರಮುಖ ರೂಪಾಂತರಿಯಾಗಿ ಕಾಡುತ್ತಿದೆ. ಹೆಚ್ಚು ಸೋಂಕು ಹರಡುವ ಸಾಮರ್ಥ್ಯದ ಹಾಗೂ ಡೆಲ್ಟಾದಂತೆಯೇ ವೇಗವಾಗಿ ಹರಡುತ್ತಿರುವ ಒಮಿಕ್ರಾನ್, ಕರೊನಾ ಸೋಂಕಿನ ಪ್ರಕರಣಗಳ ಸುನಾಮಿಗೆ ಕಾರಣವಾಗಬಹುದೆಂಬುದು ನನ್ನ ಚಿಂತೆಯಾಗಿದೆ ಎಂದು ಅವರು ಹೇಳಿದರು.
ಲಸಿಕೆ ಪರಿಣಾಮ 9 ತಿಂಗಳು: ಕರೊನಾ ಲಸಿಕೆಯ ರಕ್ಷಣೆ 9 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಸೋಂಕಿನ ತೀವ್ರತೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಆಯ್ದ ವಿಭಾಗಗಳಿಗೆ ‘ಮುನ್ನೆಚ್ಚರಿಕೆ ಡೋಸ್’ ನೀಡಲಾಗುವುದೆಂದು ಅದು ವಿವರಿಸಿದೆ.
ಅಮೆರಿಕದಲ್ಲಿ ಕೇಸ್ ಗಗನಮುಖಿ: ಕರೊನಾ ಸೋಂಕಿತರ ಸಂಖ್ಯೆ ಅಮೆರಿಕದಲ್ಲಿ ಅಪಾರ ಪ್ರಮಾಣದಲ್ಲಿ ಏರುತ್ತಿದೆ. ದೈನಿಕ ಸರಾಸರಿ 2,65,000 ಪ್ರಕರಣಗಳು ದಾಖಲಾಗುತ್ತಿದ್ದು ಈ ವರೆಗಿನ ಎಲ್ಲ ದಾಖಲೆಯನ್ನು ಅದು ಮುರಿದಿದೆ. ಹೊಸ ಒಮಿಕ್ರಾನ್ ಪ್ರಭೇದವೇ ಈ ಏರಿಕೆಗೆ ಕಾರಣವಾಗಿದೆ.
ಶೇ. 150 ಏರಿಕೆ ಸಾಧ್ಯತೆ: ದೇಶದಲ್ಲಿ ಏಳಬಹುದಾದ ಕರೊನಾ ಸೋಂಕಿನ ಮೂರನೇ ಅಲೆ ವೇಳೆ ಮಹಾರಾಷ್ಟ್ರದಲ್ಲಿ ಎರಡನೇ ಅಲೆಗೆ ಹೋಲಿಸಿದರೆ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 150ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದ್ದು ರಾಜ್ಯಕ್ಕೆ ಭಯ ಕಾಡತೊಡಗಿದೆ. ಮುಂಬೈ, ಥಾಣೆ, ನಾಸಿಕ್, ಪುಣೆ, ಸೋಲಾಪುರ, ಸಾಂಗ್ಲಿ ಮತ್ತು ಸತಾರಾ ಸಹಿತ ಸುಮಾರು ಒಂದು ಡಜನ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಜನರು ಶಿಸ್ತು ಹಾಗೂ ಕರೊನಾ ನಿಯಂತ್ರಣ ಕ್ರಮಗಳನ್ನು ಪಾಲಿಸದಿರುವುದು ಸಮಸ್ಯೆಗೆ ಕಾರಣ ಎಂದು ಸರ್ಕಾರ ಅಭಿಪ್ರಾಯ ಪಟ್ಟಿದೆ.
ಸಾಮುದಾಯಿಕ ಪ್ರಸರಣ: ರಾಷ್ಟ್ರ ರಾಜಧಾನಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಿದ 115 ಕೋವಿಡ್ ಸ್ಯಾಂಪಲ್ಗಳಲ್ಲಿ ಶೇಕಡ 46 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಕಳವಳಕಾರಿಯಾದ ಹೊಸ ಪ್ರಭೇದ ಕ್ರಮೇಣವಾಗಿ ಸಮುದಾಯದಲ್ಲಿ ಹರಡುತ್ತಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗುರುವಾರ ಹೇಳಿದ್ದಾರೆ.
ಎನ್-95 ಮಾಸ್ಕ್ ಬಳಕೆ ಅಗತ್ಯ ದೇಶಾದ್ಯಂತ ದೆಹಲಿ ಮಾದರಿ?: ದೆಹಲಿಯ ಕರೊನಾ ನಿರ್ವಹಣೆಯ ಜಿಆರ್ಎಪಿ ಮಾದರಿಯನ್ನು ದೇಶದಾದ್ಯಂತ ಅನುಸರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಮತ್ತು ಮುಂಬೈಗಳಲ್ಲಿ ಕೊವಿಡ್ ಸ್ಪೋಟಗೊಂಡಿದ್ದು, ಬೆಂಗಳೂರು, ಗುರುಗ್ರಾಮ, ಚೆನ್ನೈ, ಕೋಲ್ಕತಾ, ಅಹಮದಾಬಾದ್ ಕೂಡ ಹಿಂದೆ ಬಿದ್ದಿಲ್ಲ. ಮುಂಬೈಯಲ್ಲಿ ಬುಧವಾರ 24 ಗಂಟೆ ಅವಧಿಯಲ್ಲಿ 2,510 ಕೋವಿಡ್ ಪ್ರಕರಣ ದಾಖಲಾಗಿದ್ದು ಹಿಂದಿನ ದಿನಕ್ಕಿಂತ ಶೇಕಡ 82ರಷ್ಟು ಜಿಗಿತವಾಗಿದೆ. ಇದೇ ಅವಧಿಯಲ್ಲಿ ದೆಹಲಿಯಲ್ಲಿ ಶೇ. 86 ಏರಿಕೆಯಾಗಿ 923 ಕೇಸ್ಗಳು ವರದಿಯಾಗಿದ್ದವು. ಪ್ರಸ್ತುತ, ಒಮಿಕ್ರಾನ್ ಪತ್ತೆಯಾಗಿರುವ 19 ರಾಜ್ಯಗಳ ಪೈಕಿ ದೆಹಲಿ ಮತ್ತು ಮಹಾರಾಷ್ಟ್ರ ಮಾತ್ರವೇ ಅತಿ ಹೆಚ್ಚು ಬಾಧಿತ ರಾಜ್ಯಗಳಾಗಿವೆ.
ಲಸಿಕೆಗಳು ಪರಿಣಾಮಕಾರಿ: ಒಮಿಕ್ರಾನ್ ಪ್ರಭೇದದ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದ್ದರೂ ರೋಗದ ತೀವ್ರತೆ ಜಾಸ್ತಿಯಿಲ್ಲ. ಈಗ ಬಳಕೆಯಲ್ಲಿರುವ ವ್ಯಾಕ್ಸಿನ್ಗಳು ಹೊಸ ಪ್ರಭೇದ ಎದುರಿಸಲು ಈಗಲೂ ಪರಿಣಾಮಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಒಮಿಕ್ರಾನ್ ರೂಪಾಂತರಿಯು ಜಗತ್ತಿನಾದ್ಯಂತ ಲಸಿಕೆ ಪಡೆದವರಿಗೂ ಪಡೆಯದವರಿಗೂ ಸೋಂಕುತ್ತಿದೆ ಎಂದವರು ತಿಳಿಸಿದ್ದಾರೆ. ‘ನಿರೀಕ್ಷಿಸಿದಂತೆ, ಟಿ ಸೆಲ್ ಇಮ್ಯುನಿಟಿ ಒಮಿಕ್ರಾನ್ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ. ಹೀಗಾಗಿ ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ’ ಎಂದವರು ಜನರಿಗೆ ಮನವಿ ಮಾಡಿದ್ದಾರೆ.