ಒಮನ್​ಗೂ ಬಂತು ಸಂಕಷ್ಟ: ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ

Oman
Published on

ಒಮನ್ ವಿದೇಶಿಯರನ್ನು ಒಳಗೊಂಡು 46 ಲಕ್ಷ ಜನಸಂಖ್ಯೆ ಇರುವ ಪುಟ್ಟ ರಾಷ್ಟ್ರ. ಮೂರು ವಾರದ ಹಿಂದೆಯಷ್ಟೇ ಇಲ್ಲಿ ಮೊದಲ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಕಳೆದೊಂದು ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಕರೊನಾ ಸೋಂಕಿತರ ಸಂಖ್ಯೆ 30 ಹಾಗೂ ಇದರಿಂದ ಒಬ್ಬರು ಮೃತಪಟ್ಟಿದ್ದಾರೆ. ಆರಂಭದಲ್ಲೇ ಎಚ್ಚರಿಕೆ ವಹಿಸುತ್ತಿದ್ದರೆ ಈಗ ಇರುವ ಪರಿಸ್ಥಿತಿ ತಲುಪುತ್ತಿರಲಿಲ್ಲ. ಭಾರತದಂತೆ ಆರಂಭದಲ್ಲೇ ಲಾಕ್​ಡೌನ್ ಜಾರಿಯಾಗುತ್ತಿದ್ದರೆ ಇನ್ನಷ್ಟು ಒಳ್ಳೆಯ ಫಲಿತಾಂಶ ಪಡೆಯುವುದು ಸಾಧ್ಯವಿತ್ತು. 130 ಕೋಟಿ ಜನಸಂಖ್ಯೆ ಇರುವ ಭಾರತವನ್ನು ಪೂರ್ಣ ಲಾಕ್​ಡೌನ್ ಮಾಡಿರುವ ಮೂಲಕ ಹರಡುತ್ತಿರುವ ಸೋಂಕಿನ ವೇಗ ಕಟ್ಟಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನ ಶ್ಲಾಘನೀಯ.

ಜನಸಂಚಾರ ನಿರ್ಬಂಧ: ಒಮನ್​ನಲ್ಲಿ ಶಾಲಾ -ಕಾಲೇಜುಗಳನ್ನು ಮುಚ್ಚಲಾಗಿದೆ. ಸಣ್ಣ ಅಂಗಡಿ, ಕ್ಷೌರದ ಅಂಗಡಿ, ಫೋಟೋ ಸ್ಟುಡಿಯೋ, ಬೇಕರಿ ಮುಂತಾದವುಗಳೂ ಮುಚ್ಚಲ್ಪಟ್ಟಿವೆ. ದೊಡ್ಡ ಮಾಲ್​ಗಳು ಕಾರ್ಯಾಚರಿಸುತ್ತಿವೆಯಾದರೂ, ವ್ಯಾಪಾರ ಕಡಿಮೆ. ಮಾಲ್ ಒಳಗೆ ಜನರನ್ನು ಬಿಡಿಬಿಡಿಯಾಗಿ ಬಿಡಲಾಗುತ್ತಿದೆ. ಒಳಗೆ ಪ್ರವೇಶಿಸುವ ಮೊದಲು ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ನಡೆಸಲಾಗುತ್ತಿದೆ. ಜ್ವರ ಅಥವಾ ಸೋಂಕಿನ ಯಾವುದೇ ಲಕ್ಷಣ ಇದ್ದವರಿಗೆ ಪ್ರವೇಶವಿಲ್ಲ. ಮಾಲ್​ಗೆ ಪ್ರವೇಶಿಸಿದವರು ನಿಗದಿತ ಅವಧಿಯೊಳಗೆ ವಾಪಸ್ ಬರಬೇಕು. ಕರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟ ಪ್ರದೇಶದ ಸುತ್ತ 4 ಕಡೆ ನಿರ್ದಿಷ್ಟ ಕಾಲಾವಧಿ ತನಕ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ. ಯಾರಾದರೂ ತುರ್ತು ಹೊರಹೋಗಲು ಅವರು ದುಡಿಯುತ್ತಿರುವ ಕಂಪನಿಯ ಅಧಿಕೃತ ಪತ್ರ ಜತೆಗಿರಬೇಕು.

ಮಕ್ಕಳು ಮನೆಯಲ್ಲೇ: ಶಾಲಾ ಮಕ್ಕಳಿಗೆ ರಜೆ ಇದ್ದರೂ ತಾಯ್ನಾಡಿಗೆ ತೆರಳುವುದು ಅಸಾಧ್ಯ. ಏಕೆಂದರೆ ಎಲ್ಲ ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಆದ್ದರಿಂದ ಎಲ್ಲ ಮಕ್ಕಳೂ ಮನೆ ಒಳಗೆ ಅಥವಾ ಕಾಂಪೌಂಡ್ ಒಳಗೆ ಆಡುತ್ತಿ್ತುವ ದೃಶ್ಯಗಳು ಇಲ್ಲಿ ಈಗ ಸಾಮಾನ್ಯ. ಮಸ್ಕತ್​ನಲ್ಲಿರುವ ಪಾರ್ಕ್​ಗಳೂ ಮುಚ್ಚಲ್ಪಟ್ಟಿವೆ. ಇತರ ರಜಾದಿನಗಳಲ್ಲಿ ಇವುಗಳು ಮಕ್ಕಳಿಂದ ವೃದ್ಧರ ತನಕ ಎಲ್ಲ ವಯೋಮಿತಿಯ ಜನರಿಂದ ತುಂಬಿರುತ್ತಿದ್ದವು. ಪ್ರತಿದಿನ ಜನ ವಾಕಿಂಗ್ ಮತ್ತು ಜಾಗಿಂಗ್ ಮಾಡುವ ಯುವಜನರು ಗುಂಪಾಗಿ ಫುಟ್​ಬಾಲ್ ಆಡುವ ಬೀಚ್​ಗಳು ಕೂಡ ಬಿಕೋ ಎನ್ನುತ್ತಿವೆ.

ಅರ್ಥವ್ಯವಸ್ಥೆ ಕುಸಿತ

ದೇಶದ್ದು ಮುಖ್ಯವಾಗಿ ಪೆಟ್ರೋಲಿಯಂ ಅವಲಂಬಿತ ಆರ್ಥಿಕ ಸ್ಥಿತಿ. ಆದರೆ ಕಚ್ಚಾತೈಲ ದರ ಈಗ ಪ್ರತಿ ಬ್ಯಾರಲ್​ಗೆ 20 ಡಾಲರ್​ಗೂ ಕಡಿಮೆ ಬಂದಿದೆ. ದೇಶದ ಆರ್ಥಿಕತೆ ಕುಸಿದಿದೆ ಎನ್ನುವುದಕ್ಕೆ ಇದೊಂದೇ ನಿದರ್ಶನ ಸಾಕು. ಇದು ಪೆಟ್ರೋಲಿಯಂಗೆ ಕಳೆದ 30 ವರ್ಷಗಳಲ್ಲೇ ಕನಿಷ್ಠ ದರ. ಈ ಹಿಂದೆ ಪ್ರತಿ ಬ್ಯಾರಲ್​ಗೆ 120 ಡಾಲರ್ ತನಕ ಏರಿರುವುದನ್ನು ನೆನಪಿಸಬಹುದು. ಆಸ್ಪತ್ರೆಗಳಲ್ಲಿ ಕೂಡ ತುರ್ತು ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ಕೂಡ ಪಾಳಿಯಲ್ಲಿ ವಾರದ 3 ದಿನ ದುಡಿಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net