

ನವದೆಹಲಿ: ದೆಹಲಿ ಹಿಂಸಾಚಾರ ಕುರಿತು ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್ ಸೇರಿ ವಿಪಕ್ಷಗಳ ಸಂಸದರು ತೋರುತ್ತಿರುವ ವರ್ತನೆ ಬಗ್ಗೆ ತೀವ್ರ ಬೇಸರಗೊಂಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಶುಕ್ರವಾರವೂ ಸದನದಿಂದ ದೂರ ಉಳಿದರು. ಬಜೆಟ್ ಅಧಿವೇಶನದ ಎರಡನೇ ಭಾಗ ಕಳೆದ ಸೋಮವಾರ ಆರಂಭವಾಗುತ್ತಲೇ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿ ವಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ್ದವು.
ಈ ವೇಳೆ ಕೆಲ ಸಂಸದರು ಸ್ಪೀಕರ್ ಆಸನದತ್ತ ಪೇಪರ್ ರಾಕೆಟ್ಗಳನ್ನು ಎಸೆದು ಪ್ರತಿಭಟಿಸಿದರು. ಇದರಿಂದ ತೀವ್ರವಾಗಿ ಬೇಸರಗೊಂಡಿರುವ ಸ್ಪೀಕರ್ ಬಿರ್ಲಾ, ಕಳೆದ ಮೂರು ದಿನಗಳಿಂದ ಲೋಕಸಭೆಗೆ ಹಾಜರಾಗದೆ ತಮ್ಮ ಕಚೇರಿಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸರ್ವ ಪಕ್ಷಗಳ ತಂಡವೊಂದು ಬಿರ್ಲಾರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಲೋಕಸಭೆಗೆ ಮರಳುವಂತೆ ಮನವಿ ಮಾಡಿಕೊಂಡಿದೆ. ಆದರೆ ಇದಕ್ಕೆ ನಿರಾಕರಿಸಿದ ಬಿರ್ಲಾ, ಎಲ್ಲ ಸಂಸದರೂ ಶಿಸ್ತಿನಿಂದ ವರ್ತಿಸಲು ಹಾಗೂ ಅಧಿವೇಶನವನ್ನು ಸುಗಮವಾಗಿ ನಡೆಸಲು ಒಪ್ಪಿಕೊಂಡರೆ ಮಾತ್ರ ನಾನು ಸ್ಪೀಕರ್ ಸ್ಥಾನದಲ್ಲಿ ಬಂದು ಕೂರುತ್ತೇನೆ ಎಂದಿದ್ದಾರೆ.
ರಾಹುಲ್ ನೇತೃತ್ವದಲ್ಲಿ ಪ್ರತಿಭಟನೆ
ಸದನದಲ್ಲಿ ತೀವ್ರ ಅಶಿಸ್ತಿನಿಂದ ವರ್ತಿಸಿದ ಹಾಗೂ ನಿಯಮ ಉಲ್ಲಂಘನೆ ಮಾಡಿದ ಕಾಂಗ್ರೆಸ್ನ 7 ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿರುವ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಯಾಗಬೇಕು ಹಾಗೂ ಅಮಾನತುಗೊಳಿಸಿರುವ ಸಂಸದರನ್ನು ಮರಳಿ ಕರೆತರಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.
ಸಂಸತ್ನಲ್ಲಿ ದೆಹಲಿ ಗಲಭೆ ಚರ್ಚೆ
ದೆಹಲಿಯಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರ ಕುರಿತು ಮಾ.11ರಂದು ಸಂಸತ್ನಲ್ಲಿ ಚರ್ಚೆ ನಡೆಯಲಿದೆ. ಗೃಹ ಸಚಿವ ಅಮಿತ್ ಷಾ ಈ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ. ಈಗ ದೆಹಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವ ಹಿನ್ನೆಲೆ ಸಂಸತ್ತಿನಲ್ಲಿ ರ್ಚಚಿಸಲು ನಾವು ಸಿದ್ಧರಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.