ಪ್ರಕೃತಿಯ ವಿಸ್ಮಯ: ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ ನೈಸರ್ಗಿಕವಾಗಿ ಜನಿಸಿದ ಆಲಿವ್ ರಿಡ್ಲಿ ಆಮೆ ಮರಿಗಳು! | California Sea Turtle Egg

 California Sea Turtle Egg
ಕ್ಯಾಲಿಫೋರ್ನಿಯಾದಲ್ಲಿ 58 ದಿನಗಳ ಕಾವು ಅವಧಿಯ ಬಳಿಕ ಆಲಿವ್ ರಿಡ್ಲಿ ಆಮೆ ಮರಿಗಳ ಜನನ.
Published on: 

California Sea Turtle Egg: ಕ್ಯಾಲಿಫೋರ್ನಿಯಾ ಬೀಚ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದ ಸಮುದ್ರ ಆಮೆ ಮೊಟ್ಟೆಗಳು 58 ದಿನಗಳ ಬಳಿಕ ಒಡೆದಿದ್ದು, ಹೊರಬಂದ ಆಲಿವ್ ರಿಡ್ಲಿ ಮರಿಗಳನ್ನು ಅಧಿಕಾರಿಗಳು ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ.

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನೈಸರ್ಗಿಕವಾಗಿ ಪತ್ತೆಯಾದ ಮೊದಲ ಸಮುದ್ರ ಆಮೆ ಗೂಡಿನ ಮೊಟ್ಟೆಗಳು ಇವಾಗಿವೆ ಎಂದು ಅಮೆರಿಕದ ಮೀನು ಮತ್ತು ವನ್ಯಜೀವಿ ಸೇವೆ (USFWS) ತಿಳಿಸಿದೆ.

ಸೆಪ್ಟೆಂಬರ್ 16ರಂದು ಆರೆಂಜ್ ಕೌಂಟಿಯ ಸೀಲ್ ಬೀಚ್ ಬಳಿ ಪತ್ತೆಯಾಗಿದ್ದ ಈ ಮೊಟ್ಟೆಗಳನ್ನು, ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಪೆಸಿಫಿಕ್ ಅಕ್ವೇರಿಯಂಗೆ ಸ್ಥಳಾಂತರಿಸಿ ಕಾವು ನೀಡಲಾಗಿತ್ತು. ಇದೀಗ ಮೊಟ್ಟೆಯೊಡೆದು ಮರಿಗಳು ಹೊರಬಂದಿದ್ದು, ಜನಸಂಚಾರ ಹಾಗೂ ಬೆಳಕಿನ ಅಡಚಣೆ ಕಡಿಮೆಯಿರುವ ತೀರದಲ್ಲಿ ಮುಂಜಾನೆ ಕತ್ತಲಿನಲ್ಲೇ ಸಮುದ್ರಕ್ಕೆ ಬಿಡಲಾಗಿದೆ.

ಮೊಟ್ಟೆಗಳಿಂದ ಹೊರಬಂದ ಆಮೆ ಮರಿಗಳು 24ರಿಂದ 48 ಗಂಟೆಗಳ ವಿಶೇಷ ಚಟುವಟಿಕೆಯ ಹಂತವನ್ನು (Frenzy Period) ಎದುರಿಸುತ್ತವೆ. ಈ ಅವಧಿಯಲ್ಲಿ ಮೊಟ್ಟೆಯ ಹಳದಿ ಭಾಗದಿಂದ ಪಡೆದ ಪೋಷಕಾಂಶಗಳ ಶಕ್ತಿಯನ್ನು ಬಳಸಿಕೊಂಡು ವೇಗವಾಗಿ ಈಜುತ್ತಾ ತೆರೆದ ಸಮುದ್ರದತ್ತ ಸಾಗುತ್ತವೆ.

ಇದನ್ನೂ ಓದಿ: 'ಹೋಟೆಲ್ ಮುಚ್ಚಿ ಬಿಡಿ!' ತಂದೆ ಮೇಲೆ ಹಲ್ಲೆ ಆರೋಪ, ವಾರಾಣಸಿಯಲ್ಲಿ ಸಹೋದರಿಯರ ಹೈಡ್ರಾಮಾ | Restaurant Vandalism

ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಇಂತಹ ಮೂರು ಆಮೆ ಗೂಡುಗಳು ಪತ್ತೆಯಾಗಿದ್ದು, ಉಳಿದ ಮೊಟ್ಟೆಗಳಿಗೂ ಅಕ್ವೇರಿಯಂನಲ್ಲಿ ಕಾವು ನೀಡಲಾಗುತ್ತಿದೆ.