'ಹೋಟೆಲ್ ಮುಚ್ಚಿ ಬಿಡಿ!' ತಂದೆ ಮೇಲೆ ಹಲ್ಲೆ ಆರೋಪ, ವಾರಾಣಸಿಯಲ್ಲಿ ಸಹೋದರಿಯರ ಹೈಡ್ರಾಮಾ | Restaurant Vandalism

 Restaurant Vandalism
ವಾರಾಣಸಿಯಲ್ಲಿ ಇಬ್ಬರು ಸಹೋದರಿಯರಿಂದ ಹೋಟೆಲ್‌ನಲ್ಲಿ ದಾಂಧಲೆ
Published on: 

Restaurant Vandalism: ತಂದೆ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂಬ ಆರೋಪದಿಂದ ಆಕ್ರೋಶಗೊಂಡ ಇಬ್ಬರು ಸಹೋದರಿಯರು ರಸ್ತೆಬದಿ ಹೋಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಹೋಟೆಲ್‌ನಲ್ಲಿದ್ದ ಪಾತ್ರೆಗಳನ್ನು ಉರುಳಿಸಿ, ಸಿಬ್ಬಂದಿ ಮೇಲೆ ನೀರು ಎರಚಿ ಆಕ್ರೋಶ ವ್ಯಕ್ತಪಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವರದಿಗಳ ಪ್ರಕಾರ, ನವೆಂಬರ್ 4ರಂದು ಸಹೋದರಿಯರ ತಂದೆ ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ಜಗಳ ನಡೆದಿತ್ತು. ಈ ವೇಳೆ ಸಿಬ್ಬಂದಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬದವರು ಭೇಲುಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಸಹೋದರಿಯರು ಹೋಟೆಲ್‌ಗೆ ತೆರಳಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ, ಸ್ಕೂಟರ್‌ನಲ್ಲಿ ಬಂದ ಇಬ್ಬರು ಮಹಿಳೆಯರು ಮೊದಲು ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಅವರಲ್ಲಿ ಒಬ್ಬರು ಹೋಟೆಲ್‌ಗೆ ನುಗ್ಗಿ ದೋಸೆ ಹಿಟ್ಟು ಸೇರಿದಂತೆ ಆಹಾರ ತಯಾರಿಸಲು ಬಳಸುವ ಮಿಶ್ರಣವಿದ್ದ ಪಾತ್ರೆಯನ್ನು ಉರುಳಿಸಿದ್ದಾರೆ. ಅಲ್ಲದೆ, ಸಿಬ್ಬಂದಿ ಮೇಲೆ ನೀರು ಎರಚಿ, 'ಹೋಟೆಲ್ ಮುಚ್ಚಿ ಬಿಡಿ' ಎಂದು ಕೂಗಿದ್ದಾರೆ.

ಇದನ್ನೂ ಓದಿ: Cyclone Akvan: 'ಅಕ್ವಾನ್' ಸೈಕ್ಲೋನ್ ಭೀತಿ: ಒಡಿಶಾ, ಬಂಗಾಳದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಹೋಟೆಲ್ ಮಾಲೀಕರ ಪ್ರಕಾರ, ಮಹಿಳೆಯರು ತಮ್ಮ ಮಾತು ಕೇಳದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯರು ಮಹಿಳೆಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳದಂತೆ ಸ್ಥಳೀಯರು ಮಧ್ಯಪ್ರವೇಶಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸಿಪಿ ಗೌರವ್ ಕುಮಾರ್ ತಿಳಿಸಿದ್ದಾರೆ.