

ಉಮರ್ಕೋಟೆ: 70 ವರ್ಷದ ವೃದ್ಧೆಯೊಬ್ಬರು ತನ್ನ ಪಿಂಚಣಿ ಹಣವನ್ನು ಪಡೆಯಲು ಸುಡಿ ಬಿಸಿಲಿನಲ್ಲಿ, ಕಷ್ಟ ಪಟ್ಟು ನಡೆದು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಡಿಶಾದ ನಬರಂಗಪುರದ ಸೂರ್ಯ ಹರಿಜನ್ ಎಂಬ ವೃದ್ಧೆ ನಡೆಯಲು ಮುರಿದ ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿಕೊಂಡು ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದಾರೆ.
ವರದಿಗಳ ಪ್ರಕಾರ ವೃದ್ಧೆ ಬಡವಳಾಗಿದ್ದು, ಆಕೆಯ ಮಗ ಕೂಲಿ ಕೆಲಸಕ್ಕೆಂದು ವಲಸೆ ಹೋಗಿದ್ದಾನೆ. ಹೀಗಾಗಿ ಪಿಂಚಣಿ ಹಣ ತಂದು ಕೊಡಲು ಯಾರೂ ಇಲ್ಲವಾಗಿರುವುದರಿಂದ, ಕೊನೆಗೆ ವೃದ್ಧೆಯೇ ಪಿಂಚಣಿ ಮೊತ್ತ ಪಡೆದುಕೊಳ್ಳಲು ಕಷ್ಟ ಪಟ್ಟು ಹೋಗಿದ್ದಾಳೆ. ವೃದ್ಧೆಯ ಇನ್ನೋರ್ವ ಪುತ್ರ ದನ ಮೇಯಿಸಲು ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಹಿಂದಿನಿಂದಲೂ ವೃದ್ಧೆಗೆ ಆನ್ಲೈನ್ ಮೂಲಕ ಪಿಂಚಣಿ ಮೊತ್ತ ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತಿತ್ತು. ಆದರೆ ಬ್ಯಾಂಕ್ ಪ್ರಾಧಿಕಾರದ ಪ್ರಕಾರ ಆಕೆಯ ಎಡಗೈ ಹೆಬ್ಬರಳಿನ ಮಾದರಿ ಕೆಲವೊಮ್ಮೆ ಹೊಂದಿಕೆಯಾಗುವುದಿಲ್ಲ. ಇದರಿಂದ ಸೂಕ್ತವಾಗಿ ಪಿಂಚಣಿ ಹಣವನ್ನು ಪಾವತಿಸಲು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ಪಿಂಚಣಿ ಮೊತ್ತ ಜಮೆ ಆಗುತ್ತಿರಲಿಲ್ಲ. ಹೀಗಾಗಿ ವೃದ್ಧೆ ಬ್ಯಾಂಕ್ಗೆ ತೆರಳಬೇಕಾಗಿ ಬಂತು ಎಂದು ವರದಿಯಾಗಿದೆ.