

ಸೊರಬ: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಸರ್ಕಾರ ಮೂಲ ಸೌಕರ್ಯ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಬಿಇಒ ಆರ್.ಪುಷ್ಪಾ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಪಾಲಕರಿಗೆ ಹಮ್ಮಿಕೊಂಡಿದ್ದ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮೂಲ ಸೌಕರ್ಯ ಕಲ್ಪಿಸಲು ನಾನು ಓದಿದ ಶಾಲೆ, ನನ್ನ ಶಾಲೆ ಎಂಬ ಕಾರ್ಯಕ್ರಮವನ್ನು ಶಿಕ್ಷಣ ಸಚಿವರು ಜಾರಿಗೊಳಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಸಲುವಾಗಿ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆಯಡಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹಳೆಯ ವಿದ್ಯಾರ್ಥಿಗಳಿಂದ 5 ಕೋಟಿ ರೂ. ಸಂಗ್ರಹವಾಗಿದೆ ಎಂದರು.
ಉತ್ತಮ ತರಬೇತಿ ಪಡೆದ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮವಸ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಮತ್ತಿತರ ಸೌಲಭ್ಯ ನೀಡುತ್ತಿದ್ದರೂ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ. ಖಾಸಗಿ ಶಾಲೆಗಳ ಯೂನಿಫಾರ್ಮ್ ಹಾಗೂ ಶಾಲೆಯ ಹೊರನೋಟ ನೋಡಿ ಮನಸೋಲುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಸರ್ಕಾರದ ಜತೆಗೆ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಬೇಕು. ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಸೊರಬ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಸುರೇಶಪ್ಪ ಮಾತನಾಡಿ, ಪಾಲಕರು ಖಾಸಗಿ ಶಾಲೆ ವ್ಯಾಮೋಹದಿಂದ ಹೊರಗೆ ಬರುವ ಅಗತ್ಯವಿದೆ. ಈಗ ಕಾಲ ಬದಲಾಗಿದೆ. ಹಿಂದಿನಂತೆ ಮೂಲ ಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲಾ ಕಾಲೇಜುಗಳಿಗಿಂತ ಉತ್ತಮವಾಗಿದೆ. ವದಂತಿಗಳಿಗೆ ಕಿವಿಕೊಡದೆ ಒಳಹೊಕ್ಕು ನೋಡಿದಾಗ ಸತ್ಯದ ಅರಿವಾಗುತ್ತದೆ. ಅಲ್ಲದೆ ಸರ್ಕಾರಿ ಶಾಲೆಗೆ ಸೇರಿಸುವುದರಿಂದ ಆರ್ಥಿಕ ಹೊರೆಯಿಂದ ಹೊರಬರಲು ಸಾಧ್ಯವಿದೆ.
ಎಸ್‌ಡಿಎಂಸಿ ಅಧ್ಯಕ್ಷ ಯುವರಾಜ್ ಮಾತನಾಡಿ, ಸರ್ಕಾರದ ಯೋಜನೆಗಳ ಜತೆಗೆ ನಮ್ಮ ಶಾಲಾಭಿವೃದ್ಧಿ ಸಮಿತಿ ಸಂಪೂರ್ಣ ಜವಾಬ್ದಾರಿ ಅರಿತು ನಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪರಿಣಾಮವಾಗಿ ಗುಣಾತ್ಮಕ ಲಿತಾಂಶ ಸಿಗುತ್ತಿದೆ. ಈ ರೀತಿಯ ಅರಿವು ಕಾರ್ಯಕ್ರಮವನ್ನು ಒಂದು ಬಾರಿಗೆ ಸೀಮಿತಗೊಳಿಸದೆ ವರ್ಷದಲ್ಲಿ ಮೂರು ಬಾರಿಯಾದರೂ ನಡೆಸಿ ಹೆಚ್ಚು ಪಾಲಕರು ಸೇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಕೆ.ಸಿ.ಶ್ರೀಕಾಂಂತ, ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಫಕೀರಪ್ಪ, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ, ಮುಖ್ಯಶಿಕ್ಷಕ ಮಾರುತಿ, ಬಿ.ನಾಗರಾಜ್, ರಮೇಶ್, ಕೆರೆಯಪ್ಪ, ಇಸಿಒ ಸಂಜೀವ್‌ಕುಮಾರ, ರಾಘವೇಂದ್ರ, ಅರುಣ್‌ಕುಮಾರ್, ಸುಧಾ ಇತರರಿದ್ದರು.