ಗುರುಗಳನ್ನು ಸ್ಮರಿಸಿ, ಗೌರವಿಸುವ ಪವಿತ್ರ ಕಾರ್ಯದಿಂದ ಸಾಮಾಜಿಕ ಮೌಲ್ಯ ಹೆಚ್ಚಲಿದೆ; ವಸಂತ ಬಡಿಗೇರ

31-RNR-07
Published on

ಹಾವೇರಿ: ಸಾಮಾಜಿಕ ಸಂಬಂಧಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕಲಿಸಿದ ಗುರುಗಳನ್ನು ಸ್ಮರಿಸಿ, ಅವರನ್ನು ಗೌರವಿಸುವ ಪವಿತ್ರ ಕಾರ್ಯದಿಂದ ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಉಳಿದು ಬೆಳೆಯುತ್ತಿದ್ದು, ಮುಂದಿನ ಜನಾಂಗಕ್ಕೆ ಒಂದು ಉತ್ತಮ ದಾರಿದೀಪವಾಗಿದೆ ಎಂದು ಪ್ರಾಧ್ಯಾಪಕ ವಸಂತ ಬಡಿಗೇರ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ 1986ರಿಂದ 1996ರ ವರೆಗಿನ ಜೆ.ಪಿ. ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃದೇವೋ ಭವ, ಪಿತೃದೇವೋ ಭವ ಹಾಗೂ ಆಚಾರ್ಯ ದೇವೋಭವ ಎನ್ನುವದು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ. ಪ್ರತಿಯೊಬ್ಬನ ಜೀವನದಲ್ಲಿ ಈ ಮೂವರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಮೂವರ ಆಶೀರ್ವಾದವು ಯಾರ ಮೇಲೆ ಇರುತ್ತದೆಯೋ ಅವರು ಸಮಾಜಕ್ಕೆ, ದೇಶಕ್ಕೆ ಆಸ್ತಿಯಾಗುತ್ತಾರೆ. ಇಲ್ಲಿ ಸೇರಿರುವ ಪ್ರತಿ ಶಿಷ್ಯ ಬಳಗವೂ ಸಾಧನೆ ಮಾಡಿದ್ದು, ಅದಕ್ಕೆ ಗುರು ಕೃಪೆಯೂ ಕಾರಣವಾಗಿದೆ ಎಂದರು.
ಅತಿಥಿ ಶಿಕ್ಷಕಿ ಎನ್.ಎಸ್. ಹಳ್ಳಿಕೇರಿ ಮಾತನಾಡಿ, ಅಜ್ಞಾನ, ಅಶಿಸ್ತು ಇರುವ ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಅಂಥ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಸಾರ್ಥಕವಾಗಬೇಕಾದರೆ ಶಿಷ್ಯ ಬಳಗವು ಉನ್ನತ ಸಾಧನೆ ಮಾಡಿದಾಗ ಮಾತ್ರ. 30 ವರ್ಷಗಳ ನಂತರ ಗುರುಬಳಗವನ್ನು ಕರೆಯಿಸಿ, ಗೌರವಿಸುವದು ಹೃದಯಸ್ಪರ್ಶಿ ಅನುಭವವಾಗಿದೆ ಎಂದರು.
ಮುಖ್ಯಶಿಕ್ಷಕಿ ಎ.ಎಲ್. ಕುಲಕರ್ಣಿ ಹಾಗೂ ಎಂ.ಪಿ. ನವಲಿ ಮಾತನಾಡಿದರು.
ಎ.ಎಚ್. ರಟಗಲ್ಲ, ಕುಸುಮಾ ಗೌಳಿ, ರಾಘವೇಂದ್ರ ವಡಗಾವಿ, ರೋನಾಲ್ಡ ಮಾಲಿನ, ಸಚಿನ ಕೊಟಗಿ, ಮಹೇಶ ಕಬ್ಬೂರ, ಅವಿನಾಶ ಬ್ರಹ್ಮೇರಿ, ಶಿವಶಂಕರ ಬಸೇಗಣ್ಣಿ, ಚನ್ನಬಸಪ್ಪ ಕಡ್ಲಿ, ಬಸವೇಶ ಪಾಟೀಲ್, ನಾರತ್ನಾ ನವಲಿ, ಪೀರೀಜ್ ದೇವಿಹೊಸೂರ, ಡಾ. ರಾಜಶೇಖರ ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net