ಫ್ರಿಜ್ಜಲ್ಲಿ ವೃದ್ಧನ ಶವ ಪತ್ತೆ! ಮೊಮ್ಮಗ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು

death
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್​: ಯುವಕನೊಬ್ಬ ಮೃತ ತಾತನ ಶವವನ್ನು ಫ್ರಿಜ್​ನಲ್ಲಿಟ್ಟುಕೊಂಡಿದ್ದ ವಿಚಿತ್ರ ಘಟನೆ ತೆಲಂಗಾಣದ ವಾರಂಗಲ್​ ಜಿಲ್ಲೆಯಿಂದ ವರದಿಯಾಗಿದೆ. ನೆರೆಹೊರೆಯವರು ದುರ್ವಾಸನೆಯ ಬಗ್ಗೆ ದೂರು ನೀಡಿದ ಮೇಲೆ ಈ ಸಂಗತಿ ಬೆಳಕಿಗೆ ಬಂದಿದೆ.

ವಾರಂಗಲ್‌ನ ಪರ್ಕಳದಲ್ಲಿ ನಿಖಿಲ್​(23) ಎಂಬುವ ತನ್ನ 93 ವರ್ಷದ ತಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತಾತನ ಪೆನ್ಷನ್​​ ಮೇಲೆ ಅವರ ಜೀವನ ಸಾಗುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಅವರ ಮನೆಯಿಂದ ದುರ್ವಾಸನೆ ಬರಲು ಆರಂಭವಾದ್ದರಿಂದ ನೆರೆಹೊರೆಯ ಜನ ದೂರು ನೀಡಿದರು. ಪೊಲೀಸರು ಮನೆಯ ಶೋಧ ನಡೆಸಿದಾಗ ಫ್ರಿಜ್ಜಿನಲ್ಲಿ ವೃದ್ಧನ ಶವ ಕೊಳೆಯುತ್ತಿರುವುದು ಕಂಡುಬಂತು.

ತನ್ನ ತಾತ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟರು. ಅವರ ಅಂತ್ಯಸಂಸ್ಕಾರ ಮಾಡಲು ತನ್ನ ಬಳಿ ಹಣವಿಲ್ಲದ್ದರಿಂದ ಶವವನ್ನು ಬೆಡ್​ಶೀಟಿನಲ್ಲಿ ಸುತ್ತಿ ಫ್ರಿಜ್​​ನಲ್ಲಿಟ್ಟಿದ್ದಾಗಿ ನಿಖಿಲ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ವೃದ್ಧನ ಸಾವು ಯಾವಾಗ ಸಂಭವಿಸಿತು ಮತ್ತು ಯುವಕನು ತನ್ನ ತಾತನ ಪೆನ್ಷನ್​ ನಿಲ್ಲದಿರಲಿ ಎಂಬ ಕಾರಣಕ್ಕೆ ದೇಹವನ್ನು ಮುಚ್ಚಿಟ್ಟಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರ್ಕಳ ಪೊಲೀಸ್​ ಠಾಣೆಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net