

ಮುಂಬೈ: ಸೈಬರ್ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ. ಎಲ್ಲೋ ಕುಳಿತು ಜನರ ಮೊಬೈಲ್ಗೆ ಕರೆ ಮಾಡಿ ಓಟಿಟಿ ಪಡೆದು ಬ್ಯಾಂಕ್ ಅಕೌಂಟ್ಗಳಿಂದ ಹಣ ಲಪಟಾಯಿಸುವುದು, ಯಾವುದೋ ಆಪ್ ಮೇಲೆ ಕ್ಲಿಕ್ ಮಾಡಿದಾಗ ಮೊತ್ತ ವರ್ಗಾವಣೆಯಾಗುವುದು ನಡೆದೇ ಇದೆ. ಇದೀಗ ಇದೇ ರೀತಿಯ ದಂಧೆಗೆ ವೃದ್ಧರೊಬ್ಬರು ಬಲಿಪಶುವಾಗಿದ್ದಾರೆ. ಓಟಿಟಿ ಚಂದಾದಾರಿಕೆಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿರುವಾಗ 77 ವರ್ಷದ ಮುಂಬೈನ ಥಾಣೆ ನಿವಾಸಿ 95 ಸಾವಿರ ರೂ. ಕಳೆದುಕೊಂಡಿದ್ದಾರೆ.
ವಂಚಕರು ಇಂಟರ್ನೆಟ್‌ನಲ್ಲಿ ಬ್ಯಾಂಕ್‌ಗಳು ಅಥವಾ ಶಾಪಿಂಗ್ ಪೋರ್ಟಲ್‌ಗಳ ನಕಲಿ ಕಸ್ಟಮರ್ ಕೇರ್ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಿದ್ದು, 77 ವರ್ಷದ ನಿವೃತ್ತ ಬ್ಯಾಂಕರ್ ಒಬ್ಬರು ತಮ್ಮ ಓವರ್-ದಿ-ಟಾಪ್ (ಓಟಿಟಿ) ಆ್ಯಪ್‌ನ ಚಂದಾದಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವಾಗ 95 ಸಾವಿರ ರೂ. ಕಳೆದುಕೊಂಡಿದ್ದಾರೆ.
ವೃದ್ಧರು ಜೂನ್ 22ರಂದು ಇಂಟರ್‌ನೆಟ್‌ನಲ್ಲಿ ಓಟಿಟಿ ಕಂಪನಿಯ ಕಸ್ಟಮರ್ ಕೇರ್ ನಂಬರ್‌ಗಾಗಿ ಹುಡುಕಾಟ ನಡೆಸಿದಾಗ ವಂಚನೆ ನಡೆದಿದೆ. ಈ ಸಂಬಂಧ ವೃದ್ಧರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕರೆಗೆ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಹೇಳಿದ ವಂಚಕ ಸಹಾಯದ ಭರವಸೆ ನೀಡಿ ಅವರ ಫೋನ್‌ನಲ್ಲಿ ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾರೆ. ನಂತರ, ವೃದ್ಧರನ್ನು ತಮ್ಮ ಫೋನ್‌ನಿಂದ 2 ರೂಪಾಯಿ ವಹಿವಾಟು ಮಾಡುವಂತೆ ಹೇಳಿದ್ದಾನೆ. ಆಗ ವೃದ್ಧರ ಫೋನ್‌ಗೆ ರಿಮೋಟ್ ಪ್ರವೇಶ ಪಡೆದ ವಂಚಕ, ನಂತರ ಅವರ ಖಾತೆಯಿಂದ ನಾಲ್ಕು ಪ್ರತ್ಯೇಕ ವಹಿವಾಟುಗಳಲ್ಲಿ 95,547 ರೂ. ಲಪಟಾಯಿಸಿದ್ದಾನೆ. ವಂಚನೆ ವೃದ್ಧರ ಅರಿವಿಗೆ ಬರುತ್ತಿದ್ದಂತೆ ತಕ್ಷಣ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.