ಓಲಾ ಕ್ಯಾಬ್​ ಆರಂಭವಾದರೂ 1,400 ಸಿಬ್ಬಂದಿ ಬೀದಿಗೆ ಬಂದಿದ್ದೇಕೆ?

Ola Layoff
Published on

ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ ನಿರ್ಬಂಧ ಸಡಿಲಿಸಿದ್ದು, ಬಸ್​ ಹಾಗೂ ಕ್ಯಾಬ್​ಗಳ ಸೇವೆ ಆರಂಭವಾಗಿದೆ. ಸೇವೆ ಆರಂಭಿಸಿದ ಒಂದೇ ದಿನದಲ್ಲಿ ಓಲಾ ಕಂಪನಿಯ 1,400 ಜನರು ಬೀದಿಗೆ ಬರುವಂತಾಗಿದೆ.

ಹೌದು... ಆ್ಯಪ್​ ಆಧಾರಿತ ಕ್ಯಾಬ್​ ಸೇವಾ ಕಂಪನಿ ಓಲಾ ನಷ್ಟದ ಕಾರಣವೊಡ್ಡಿ 1,400 ಸಿಬ್ಬಂದಿಯನ್ನು ವಜಾಗೊಳಿಸಿದೆ. ಕ್ಯಾಬ್​ ಸೇವೆ, ಹಣಕಾಸು ಸೇವೆ ಹಾಗೂ ಆಹಾರ ಪೂರೈಕೆ ಘಟಕಗಳಿಂದ ನೌಕರರನ್ನು ಕಡಿಮೆ ಮಾಡಲಾಗಿದೆ ಎಂದು ಕಂಪನಿ ಸಿಇಒ ಭವೀಶ್​ ಅಗರ್​ವಾಲ್ ಮಾಹಿತಿ ನೀಡಿದ್ದಾರೆ.

ಕರೊನಾ ವೈರಸ್​ನಿಂದಾಗಿ ವಹಿವಾಟು ಅತ್ಯಂತ ಅನಿಶ್ಚಿತ ಹಾಗೂ ಅಸ್ಪಷ್ಟವಾಗಿದೆ. ​ ಸಂಕಷ್ಟದಿಂದ ಒಟ್ಟಾರೆ ಉಂಟಾಗಿರುವ ಪರಿಣಾಮವು ದೀರ್ಘಕಾಲದವರೆಗೆ ಮುಂದುವರಿಯಲಿದೆ ಎಂದು ಸಿಬ್ಬಂದಿಗೆ ಕಳುಹಿಸಿರುವ ಇಮೇಲ್​ನಲ್ಲಿ ಭವೀಶ್​ ವಿವರಿಸಿದ್ದಾರೆ.

ಕಳೆದೆರಡು ತಿಂಗಳಲ್ಲಿ ಕಂಪನಿ ಆದಾಯ ಶೇ.95 ಕಡಿಮೆಯಾಗಿದೆ. ಹೀಗಾಗಿ ಸಿಬ್ಬಂದಿಯನ್ನು ವಜಾ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕರೊನಾ ಕೋಟ್ಯಂತರ ಜನರ ಬದುಕಿಗೆ ಭಾರಿ ಸಂಕಷ್ಟ ತಂದಿಟ್ಟಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಬ್​ ಸೇವೆಗೆ ಭಾರಿ ಹೊಡೆತ ನೀಡಿದೆ. ಭಾರತದಲ್ಲಷ್ಟೇ ಅಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಓಲಾ ಕ್ಯಾಬ್​ ಚಾಲಕರ ಹಾಗೂ ಅವರ ಕುಟುಂಬಕ್ಕೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಸಿಬ್ಬಂದಿ ಗಾತ್ರವನ್ನು ತಗ್ಗಿಸಲಾಗುತ್ತಿದೆ ಎಂದಿದ್ದಾರೆ.

ಕ್ಯಾಬ್​ ಸೇವಾ ವಿಭಾಗದಲ್ಲಿ ಈ ವಾರದಲ್ಲಿ ವಜಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಹಣಕಾಸು ಹಾಗೂ ಆಹಾರ ಪೂರೈಕೆ ವಲಯದ ಸಿಬ್ಬಂದಿ ವಜಾ ಪ್ರಕ್ರಿಯೆ ನಡೆಯಲಿದೆ. ಇದಾದ ನಂತರ ಇನ್ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯದು ಎಂದು ಭವೀಶ್​ ಹೇಳಿದ್ದಾರೆ.

ಇದನ್ನೂ ಓದಿ; ಕರೊನಾ ವಿರುದ್ಧ ಹೋರಾಟಕ್ಕಾಗಿ 362 ಕೋಟಿ ರೂ. ಸಂಗ್ರಹಿಸಿದ ಶತಾಯುಷಿಗೆ ನೈಟ್​ಹುಡ್​ ಗೌರವ 

4,500ಕ್ಕೂ ಅಧಿಕ ಸಿಬ್ಬಂದಿ ಹೊಂದಿರುವ ಓಲಾ ಕಳೆದ ವರ್ಷ 350 ಜನರನ್ನು ಕೆಲಸದಿಂದ ತೆಗೆದಿತ್ತು. ಇತ್ತೀಚೆಗೆ ಉಬರ್​, ಜೋಮ್ಯಾಟೋ, ಸ್ವಿಗ್ಗಿ ಕಂಪನಿಗಳು ಕೂಡ ಸಿಬ್ಬಂದಿ ವಜಾಗೊಳಿಸಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net