499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭ! ಇದಿನ್ನೂ ಪ್ರಾರಂಭವೆಂದ ಸಂಸ್ಥೆ

ಪಲಅ
Published on

ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್​ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಲು ಓಲಾ ಸಂಸ್ಥೆ ಸಿದ್ಧವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಓಲಾದ ಸ್ಕೂಟರ್​ಗಾಗಿ ಕಾಯುತ್ತಿರುವ ಜನರಿಗೆ ಸಂಸ್ಥೆ ಒಂದು ಸಿಹಿ ಸುದ್ದಿ ನೀಡಿದೆ. ಸ್ಕೂಟರ್​ನ ಬುಕ್ಕಿಂಗ್​ನ್ನು ಇಂದಿನಿಂದ ಆರಂಭಿಸಲಾಗಿದೆ.

ವಿಶೇಷವೆಂದರೆ ಕೇವಲ 499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದೆ. ಇನ್ನೂ ಸ್ಕೂಟರ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಸ್ಕೂಟರ್​ನ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆಗಲೇ ಬುಕ್ಕಿಂಗ್ ಆರಂಭವಾಗಿದೆ. ಮುಂದೆ ಒಂದು ವೇಳೆ ನಿಮಗೆ ಗಾಡಿ ಇಷ್ಟವಾಗಿಲ್ಲವಾದರೆ ಬುಕ್ಕಿಂಗ್ ಹಣವನ್ನು ಸಂಪೂರ್ಣವಾಗಿ ವಾಪಸು ಕೊಡುವುದಾಗಿಯೂ ಸಂಸ್ಥೆ ತಿಳಿಸಿದೆ. ರಿಫಂಡ್ ಮಾಡಲು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಲಾಗಿದೆ.

ಬುಕ್ಕಿಂಗ್ ಬಗ್ಗೆ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕಪ್ಪು ಬಣ್ಣದ ಸ್ಕೂಟರ್ ಇರುವ ಪೋಸ್ಟರ್​ನಲ್ಲಿ ಬುಕ್ಕಿಂಗ್ ಆರಂಭವಾಗಿರುವುದಾಗಿ ತಿಳಿಸಲಾಗಿದೆ. ಇದಿನ್ನೂ ಆರಂಭ ಎಂದು ಸಂಸ್ಥೆ ಹೇಳಿಕೊಂಡಿದೆ. ಮುಂಬರುವ ದಿನಗಳಲ್ಲಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಬಿಡುವುದಾಗಿ ತಿಳಿಸಲಾಗಿದೆ. ಸ್ಕೂಟರ್​ ಬುಕ್ಕಿಂಗ್ ಮಾಡ ಬಯಸುವವರು ಓಲಾ ಎಲೆಕ್ಟ್ರಿಕ್ ವೆಬ್​ಸೈಟ್​ನಲ್ಲಿ ಖಾತೆ ತೆರೆದು ಬುಕ್ಕಿಂಗ್ ಮಾಡಬಹುದಾಗಿದೆ.

ಈ ಹಿಂದೆ ಸಂಸ್ಥೆಯು ಯಾವ ಬಣ್ಣದ ಸ್ಕೂಟರ್​ ಅನ್ನು ನೀವು ಬಯಸುತ್ತೀರಿ ಎಂದು ಜನರಲ್ಲಿ ಕೇಳಿತ್ತು. ಜನರ ಬೇಡಿಕೆ ಪ್ರಕಾರವೇ ಸ್ಕೂಟರ್​ ಬಣ್ಣಗಳನ್ನು ನಿರ್ಧರಿಸಿರಬಹುದು ಎನ್ನಲಾಗಿದೆ. ತಮಿಳುನಾಡಿನಲ್ಲಿ ಓಲಾ ಪ್ಲಾಂಟ್ ತೆರೆಯಲಾಗಿದ್ದು, ಅಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್​ಗಳ ನಿರ್ಮಾಣವಾಗುತ್ತಿದೆ. ಅದಕ್ಕೆಂದು ಸಂಸ್ಥೆ 2,400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net