ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ... ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

ola cab
Published on

ಬೆಂಗಳೂರು: ಓಲಾ ಕಂಪನಿಗೆ ನಾಲ್ವರು ಖತರ್ನಾಕ್ ಚಾಲಕರ ಹೈಟೆಕ್​ ವಂಚನೆ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2 ಇನ್ನೋವಾ ಕಾರು, 1 ಸ್ವಿಫ್ಟ್ ಕಾರು, 500 ಸಿಮ್ ಕಾರ್ಡ್, 16 ಮೊಬೈಲ್, ಲ್ಯಾಪ್​ಟ್ಯಾಪ್ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ರಾಹಕರಂತೆ ಕಾರುಗಳನ್ನು ತಾವೇ ಬುಕ್​ ಮಾಡಿಕೊಂಡು ಎಲ್ಲಿಗೂ ಹೋಗದೆ ದಿನಕ್ಕೆ ಸುಮಾರು 20 ಟ್ರಿಪ್​ ಮಾಡಿದ್ದೇವೆಂದು ಕುಳಿತಲ್ಲೇ ಓಲಾ ಕಂಪನಿಯಿಂದ ಪ್ರೋತ್ಸಾಹಧನ ಪಡೆದಿರುವ ಈ ಹೈಟೆಕ್​ ವಂಚನೆಯ ಪರಿ ಎಂತಹವರನ್ನೂ ಬೆಚ್ಚಿ ಬೀಳಿಸುತ್ತೆ.

ಭರತ್​ ನಗರದ ನಾಗೇಶ್(36), ಹೊಸಕೆರೆಹಳ್ಳಿ ರವಿ(21), ಬಸವಾಪುರದ ಮನು (27), ಕೆಂಪೇಗೌಡ ನಗರದ ಸತೀಶ್(32) ಬಂಧಿತರು. ಓಲಾ ಕಂಪನಿಯ ಇಡೀ ವ್ಯವಹಾರ ತಂತ್ರಜ್ಞಾನದಿಂದಲೇ ನಡೆಯುತ್ತಿದೆ. ಈ ತಂತ್ರಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿಗಳು ಅದೇ ಕಂಪನಿಗೆ ಮಾಕ್ ಆ್ಯಪ್ ಬಳಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.

ವಂಚನೆ ಹೇಗೆ?: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿನಲ್ಲಿ ಸಿಮ್​ಕಾರ್ಡ್​ ಪಡೆಯುತ್ತಿದ್ದ ಆರೋಪಿಗಳು ತಮ್ಮ ಕಾರುಗಳನ್ನು ಓಲಾ ಕಂಪನಿಗೆ ಸೇರಿಸಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿದ್ದರು. ತಮ್ಮ ಬಳಿ 50 ಬುಕಿಂಗ್​ ಐಡಿ ಇರುವುದಾಗಿ ಸುಳ್ಳು ಹೇಳಿ ಕಂಪನಿಯಿಂದ ತಮ್ಮ ಕಾರುಗಳಿಗೆ ಟ್ರಿಪ್​ ಒದಗಿಸಲು ಅನುಮತಿ ಪಡೆದಿದ್ದರು.

ಆರೋಪಿಗಳು ನಕಲಿ ಸಿಮ್ ಕಾರ್ಡ್​ಗಳನ್ನು ಬಳಸಿ ಗ್ರಾಹಕರಂತೆ ಕ್ಯಾಬ್ ಬುಕ್ ಮಾಡಿಕೊಳ್ಳುತ್ತಿದ್ದರು. ಟ್ರಿಪ್ ಬುಕ್ ಮಾಡಿದ ನಂತರ ಒಂದು ಮೀಟರ್ ಕೂಡ ಕ್ಯಾಬ್ ಮುಂದೆ ಹೋಗಿರುವುದಿಲ್ಲ. ಆದರೂ ತಂತ್ರಜ್ಞಾನ ಬಳಸಿ ಒಂದು ಲೋಕೇಷನ್​ನಿಂದ ಮತ್ತೊಂದು ಲೋಕೇಷನ್​ಗೆ ಸಂಚಾರ ಮಾಡಿದೆ ಎಂದು ಆ್ಯಪ್​ನಲ್ಲಿ ನಮೂದಾಗುವಂತೆ ಮಾಡುತ್ತಿದ್ದರು.

ಪ್ರತಿನಿತ್ಯ 15ರಿಂದ 20 ಟ್ರಿಪ್ ಮಾಡುವ ಕ್ಯಾಬ್ ಚಾಲಕರಿಗೆ ಓಲಾ ಕಂಪನಿ ಇನ್ಸೆಟಿವ್ ನೀಡುತ್ತಿದೆ. ಇದನ್ನು ಕುಳಿತಲ್ಲೇ ಪಡೆಯಲು ಸಂಚು ರೂಪಿಸಿದ ಈ ಖತರ್ನಾಕ್​ ಚಾಲಕರು ಆ್ಯಪ್ ಬಳಸಿ ಕಂಪನಿಗೆ ಮೋಸ ಮಾಡಿದ್ದಾರೆ.

ಈ ಪ್ರಕರಣ ಭೇದಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ, ನಾಲ್ವರು ವಂಚಕರನ್ನು ಬಂಧಿಸಿದೆ. ಅವರಿಂದ 23 ಲಕ್ಷ ರೂ. ಬೆಲೆಯ 2 ಇನ್ನೋವಾ ಕಾರು, ಒಂದು ಸ್ವಿಫ್ಟ್ ಕಾರು, 500 ಸಿಮ್ ಕಾರ್ಡ್​ಗಳು, 16 ಮೊಬೈಲ್, ಲ್ಯಾಪ್​ಟಾಪ್. ಐಡಿ ಕಾರ್ಡ್ ಮುದ್ರಿಸುವ 2 ಪ್ರಿಂಟರ್​ ಅನ್ನು ವಶಕ್ಕೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net