ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಒಕ್ಕಲಿಗ ಸಚಿವರು; ಡಿಕೆಶಿ ಬೆನ್ನಿಗೆನಿಂತ ಕೈ ನಾಯಕರು

DK Shivakumar
Published on

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಬಹಿರಂಗವಾಗುವುದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂಬ ಜೆಡಿಎಸ್ ನಾಯಕರ ಆರೋಪದ ಆಧಾರದಲ್ಲಿ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆದಿರುವುದು ಕೈ ಪಾಳಯವನ್ನು ಕಂಗಾಲು ಮಾಡಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಕೀಲ ದೇವರಾಜೇಗೌಡ ನೀಡಿರುವ ಹೇಳಿಕೆ, ದಾಖಲೆ ಬಿಡುಗಡೆ ಕಾಂಗ್ರೆಸ್ ನಿದ್ರೆಗೆಡಿಸಿದೆ. ಈ ಬೆಳವಣಿಗೆ ಪ್ರಜ್ವಲ್ ಮೂಲ ಪ್ರಕರಣ ಹೊರತು ಬೇರೆ ದಿಕ್ಕಿನತ್ತ ಹೋಗಬಹುದು ಮತ್ತು ಭವಿಷ್ಯದಲ್ಲಿ ರಾಜಕೀಯವಾಗಿ ಸಂಕಟ ತರಬಹುದೆಂಬ ಲೆಕ್ಕಾಚಾರದಲ್ಲೇ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಎಚ್‌ಡಿಕೆ, ದೇವರಾಜೇಗೌಡರನ್ನು ತರಾಟೆಗೆ ತೆಗೆದುಕೊಂಡು ವಿಷಯಾಂತರ ಮಾಡದಂತೆ ತಾಕೀತು ಮಾಡಿದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಮಧ್ಯ ಪ್ರವೇಶವಾಗಿಲ್ಲ. ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.

ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದರು.

ಇಂತಹ ಸೂಕ್ಷ್ಮವಾದ ವಿಚಾರವನ್ನು ಜನತಾದಳದವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯದಾದ್ಯಂತ ಕರೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕೀಯ ಮಾಡಲು ದಳದವರು ಹೊರಟಿದ್ದಾರೆ ಎಂದು ಟೀಕಿಸಿದರು.

ಡಿಕೆಶಿ, ದೇವರಾಜೇಗೌಡ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸಹ ಏನೂ ಇಲ್ಲ. ನಿನ್ನಿಂದ ಬಹಳ ಉಪಯೋಗವಾಗುತ್ತದೆ ಬಾ ಎಂದು ಹೇಳಿಲ್ಲ. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಕೂಡ ಬಿಜೆಪಿ ನಾಯಕ ಆಗಿರುವ ಕಾರಣಕ್ಕೆ ಪೋನ್ ನೀಡಿದಾಗ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರ ಮಧ್ಯಪ್ರವೇಶವಾಗಿಲ್ಲ ಎಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net