

ಬೆಂಗಳೂರು: ಇತ್ತೀಚೆಗೆ ದಂಪತಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣವಿದ್ದ ಬ್ಯಾಗ್ ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ನಿವಾಸಿ ಗಿರಿ ಕುಮಾರ್ ಅಲಿಯಾಸ್ ಗಿರಿ(೪೧) ಬಂಧಿತ. ಆರೋಪಿಯಿಂದ ೨೫ ಲಕ್ಷ ರೂ. ಮೌಲ್ಯದ ೪೪೯ ಗ್ರಾಂ ಚಿನ್ನ ಮತ್ತು ವಜ್ರಾಭರಣ ಜಪ್ತಿ ಮಾಡಲಾಗಿದೆ. ಅ.೨೧ರಂದು ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್ ಬಳಿ ರಾಜೇಶ್ ಶ್ರೀವಾಸ್ತವ್ ಅವರು ತಮ್ಮ ಪತ್ನಿ ಜತೆಗೆ ಕಾರಿನಲ್ಲಿ ಹೋಗುವಾಗ ಕೆಲ ದುಷ್ಕರ್ಮಿಗಳು ಕಾರು ಪಂಕ್ಚರ್ ಆಗಿದೆ ಎಂದು ದಂಪತಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ರಾಜೇಶ್ ದಂಪತಿ ಕೆಂಗೇರಿಯ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್‌ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಲಾಕರ್‌ನಲ್ಲಿ ಸುಮಾರು ೫೦೦ ಗ್ರಾಂ ಚಿನ್ನಾಭರಣಗಳನ್ನು ಇರಿಸಿದ್ದರು. ಅ.೨೧ರಂದು ರಾಜೇಶ್ ದಂಪತಿ ಬ್ಯಾಂಕ್ ತೆರಳಿ ಲಾಕರ್‌ನಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಕಾರಿನಲ್ಲಿ ಇರಿಸಿಕೊಂಡು ಮನೆ ಕಡೆಗೆ ಹೊರಟ್ಟಿದ್ದಾರೆ. ಈ ನಡುವೆ ಬ್ಯಾಂಕ್ ಬಳಿ ಕುಳಿತು ರಾಜೇಶ್ ದಂಪತಿ ಚಲನವಲನ ಗಮನಿಸಿರುವ ದುಷ್ಕರ್ಮಿಗಳು, ಕಾರಿನ ಹಿಂಬದಿ ಚಕ್ರ ಪಂಕ್ಚರ್ ಮಾಡಿದ್ದಾರೆ. ಕಾರು ಪಂಕ್ಚರ್ ಆಗಿರುವುದನ್ನು ಗಮನಿಸದ ದಂಪತಿ ಮನೆ ಕಡೆಗೆ ಹೊರಟ್ಟಿದ್ದರು. ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್ ಬಳಿ ನಿಧಾನಗತಿಯಲ್ಲಿ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು, ಕಾರಿನ ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ರಾಜೇಶ್ ಕಾರು ಪಕ್ಕಕ್ಕೆ ಹಾಕಿ ನೋಡಿದಾಗ ಟೈಯರ್ ಪಂಕ್ಚರ್ ಆಗಿರುವುದು ಕಂಡು ಬಂದಿದೆ.
ಬ್ಯಾಗ್ ಎಗರಿಸಿ ಪರಾರಿ:
ಇದೇ ವೇಳೆ ಮತ್ತಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಸಮೀಪದಲ್ಲೇ ಪಂಕ್ಚರ್ ಅಂಗಡಿ ಇದೆ ಎಂದು ದಂಪತಿ ಗಮನ ಬೇರೆಡೆ ಸೆಳೆದಿದ್ದಾರೆ. ಈ ವೇಳೆ ಕಾರಿನಿಂದ ದಂಪತಿ ಕೆಳಗೆ ಇಳಿದು ಪಂಕ್ಚರ್ ಅಂಗಡಿ ಕಡೆಗೆ ನೋಡುವಾಗ, ಇನ್ನಿಬ್ಬರು ದ್ವಿಚಕ್ರ ವಾಹನದಲ್ಲಿ ಕಾರಿನ ಬಾಗಿಲು ತೆರೆದು ಚಿನ್ನಾಭರಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಉಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಪಂಕ್ಚರ್ ಅಂಗಡಿ ಬಳಿಗೆ ಕಾರು ತೆಗೆದುಕೊಂಡು ಹೋಗಲು ರಾಜೇಶ್ ದಂಪತಿ ಕಾರಿನೊಳಗೆ ಕೂರಲು ನೋಡಿದಾಗ ಆಸನದ ಮೇಲೆ ಇಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಐವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಓಜಿ ಕುಪ್ಪಂ ಗ್ಯಾಂಗ್?
ಓಜಿ ಕುಪ್ಪಂ ಎಂಬುದು ಕುಖ್ಯಾತ ದರೋಡೆಕೋರರ ಗ್ಯಾಂಗ್. ಈ ಗ್ಯಾಂಗ್‌ನ ಸದಸ್ಯರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್ ಗೊಲ್ಲ ಕುಪ್ಪಂ ಎಂಬ ಹಳ್ಳಿ ನಿವಾಸಿಗಳು. ಇವರು ವೃತ್ತಿಪರ ದರೋಡೆಕೋರರು. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳ ಬಳಿ ಕುಳಿತು ಹಣ, ಚಿನ್ನಾಭರಣ ತೆಗೆದುಕೊಂಡು ಬರುವ ಸಾರ್ವಜನಿಕರ ಮೇಲೆ ನಿಗಾ ವಹಿಸಿ, ಹಿಂಬಾಲಿಸಿ ಮಾರ್ಗ ಮಧ್ಯೆ, ಟೈಯರ್ ಪಂಕ್ಚರ್, ಇಂಜಿನ್‌ನಲ್ಲಿ ಆಯಿಲ್ ಸೋರಿಕೆ, ಅಪಘಾತ ಹೀಗೆ ನಾನಾ ರೀತಿಯಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಾರೆ. ಬಳಿಕ ಕದ್ದ ಚಿನ್ನಾಭರಣವನ್ನು ಹಂಚಿಕೊಂಡು ಮೋಜು ಮಾಡಿ ವ್ಯಯಿಸುತ್ತಾರೆ. ಈ ಗ್ಯಾಂಗ್‌ನ ಸದಸ್ಯರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
ಸಿಸಿ ಕ್ಯಾಮರ ದೃಶ್ಯ ಆಧರಿಸಿ ಸೆರೆ:
ಕೆಂಗೇರಿ ಠಾಣೆ ಪೊಲೀಸರು ತನಿಖೆಗೆ ಇಳಿದಾಗ ಚಂದ್ರಾಲೇಔಟ್‌ನ ಕೆನರಾ ಬ್ಯಾಂಕ್ ಬಳಿ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಗಿರಿ ಕುಮಾರ್‌ನ ಚಲನವಲನಗಳು ಸೆರೆಯಾಗಿದ್ದವು. ಈ ಸುಳಿವಿನ ಮೇರೆಗೆ ಇದು ಓಜಿ ಕುಪ್ಪಂ ಗ್ಯಾಂಗ್‌ನ ಕೈ ಚಳಕ ಎಂಬುದು ಖಚಿತಪಡಿಸಿಕೊಂಡು ಸಬ್‌ಇನ್‌ಸ್ಪೆಕ್ಟರ್ ಬೈರಪ್ಪ ನೇತೃತ್ವದ ತಂಡ ಆಂಧ್ರಪ್ರದೇಶದ ಓಜಿ ಕುಪ್ಪಂಗೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿ ಗಿರಿ ಕುಮಾರ್‌ನನ್ನು ಬಂಧಿಸಿ ನಗರಕ್ಕೆ ತಂದಿದೆ. ಆರೋಪಿ ಗಿರಿ ಕುಮಾರ್ ಈ ಹಿಂದೆ ನಗರದ ಜಿಗಣಿ, ಅಮೃತಹಳ್ಳಿ, ಆನೇಕಲ್ ಸೇರಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದರೋಡೆ ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ತಮ್ಮ ಗ್ಯಾಂಗ್ ಜತೆ ಸೇರಿಕೊಂಡು ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.