

Strait of Hormuz : ತನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಕಠಿಣ ನಿರ್ಧಾರ ತೆಗೆದುಕೊಂಡಿದೆ. ವಿಶ್ವದ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಸಂಸತ್ತು ಅನುಮೋದನೆ ನೀಡಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.
ಅನುಮೋದನೆ ನೀಡಿದ್ದರೂ ಇರಾನ್ನ ಅತ್ಯುನ್ನತ ಭದ್ರತಾ ಪ್ರಾಧಿಕಾರವಾದ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ನಿರ್ಧಾರವನ್ನು ಅಂತಿಮಗೊಳಿಸುವ ಅಗತ್ಯವಿದೆ ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯ ಮೇಜರ್ ಜನರಲ್ ಕೌಸಾರಿ ಹೇಳಿದ್ದಾರೆ. ಒಂದು ವೇಳೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದರೆ, ವ್ಯಾಪಾರ ಹರಿವಿಗೆ ಅಡ್ಡಿಯಾಗಿ, ತೈಲ ಬೆಲೆಗಳು ಏರಿಕೆಯಾಗುತ್ತವೆ ಮತ್ತು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಾಧ್ಯತೆಯಿದೆ. ಏಕೆಂದರೆ, ದೈನಂದಿನ ಜಾಗತಿಕ ತೈಲ ಬಳಕೆಯ ಶೇ. 20 ರಷ್ಟು ಇದೇ ಜಲಸಂಧಿಯಿಂದ ಹಾದುಹೋಗುತ್ತದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಕಾರ್ಯತಂತ್ರದ ತೈಲ ಮತ್ತು ಅನಿಲ ಸಾಗಣೆ ಮಾರ್ಗವಾಗಿದೆ. ಇದು ಇರಾನ್ ಮತ್ತು ಅರಬ್ ಕೊಲ್ಲಿ ರಾಷ್ಟ್ರಗಳ ನಡುವೆ ಇದೆ. ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗ ಈ ಮಾರ್ಗದ ಮೂಲಕ ಹಾದುಹೋಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಕತಾರ್ ಮತ್ತು ಇರಾನ್ ಸೇರಿದಂತೆ ಇತರ ದೇಶಗಳಿಂದ ರಫ್ತುಗಳು ಈ ಜಲಸಂಧಿಯ ಮೂಲಕ ಹಾದು ಹೋಗುತ್ತವೆ.
161 ಕಿಲೋಮೀಟರ್ ಉದ್ದದ ಹಾರ್ಮುಜ್ ಜಲಸಂಧಿಯು ಅದರ ಅತ್ಯಂತ ಕಿರಿದಾದ ಹಂತದಲ್ಲಿ ಸುಮಾರು 33 ಕಿಲೋಮೀಟರ್ ಅಗಲವಿದೆ. ಈ ಭಾಗದಲ್ಲಿರುವ ಹಡಗು ಮಾರ್ಗದ ಅಗಲ ಕೇವಲ ಮೂರು ಕಿಲೋಮೀಟರ್. ಒಂದು ವೇಳೆ ಈ ಮಾರ್ಗ ಮುಚ್ಚಿದರೆ ತೈಲ ಬೆಲೆ ಗಗನಕ್ಕೇರುತ್ತದೆ ಎಂದು ವರದಿಗಳು ಹೇಳುತ್ತವೆ. ಅಮೆರಿಕ, ಯುರೋಪ್ ಮತ್ತು ಏಷ್ಯಾ ಬಿಕ್ಕಟ್ಟಿನಲ್ಲಿ ಸಿಲುಕಲಿವೆ. ಭಾರತವನ್ನು ತಲುಪುವ 5.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದಲ್ಲಿ ಸುಮಾರು 2 ಮಿಲಿಯನ್ ಬ್ಯಾರೆಲ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ತಲುಪುತ್ತವೆ.
ಭಾರತವು ರಷ್ಯಾ ಮತ್ತು ಕೆಲವು ಅರಬ್ ರಾಷ್ಟ್ರಗಳು ಸೇರಿದಂತೆ ವಿವಿಧ ತೈಲ ಮತ್ತು ಇಂಧನ ಪೂರೈಕೆ ಪಾಲುದಾರರನ್ನು ಹೊಂದಿದ್ದರೂ, ಅದರ ಪೂರೈಕೆಯ ಹೆಚ್ಚಿನ ಭಾಗವು ಇರಾನ್ನಿಂದ ಬರುತ್ತದೆ. ಒಂದು ವೇಳೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ, ಭಾರತೀಯ ಪೂರೈಕೆಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ನಂಬಿದ್ದಾರೆ. ಇದು ತೈಲ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಸರಕುಗಳ ಬೆಲೆಯೂ ಹೆಚ್ಚಾಗಬಹುದು ಎಂದಿದ್ದಾರೆ. ಆದರೆ, ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪರಿಸ್ಥಿತಿಯನ್ನು ನಿಭಾಯಿಸಬಹುದು ಎನ್ನುವ ಮೂಲಕ ಜನರ ಚಿಂತೆಯನ್ನು ದೂರ ಮಾಡಿದ್ದಾರೆ. ಇಂಧನ ದರಗಳು ನಿಯಂತ್ರಣದಲ್ಲಿವೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ, ಪ್ರಮುಖ ತೈಲ ಚೆಕ್ ಪಾಯಿಂಟ್ ಮೂಲಕ ಸಾಗಣೆ ಸಂಚಾರವನ್ನು ನಿಲ್ಲಿಸಲು ಇರಾನ್ಗೆ ಕಾನೂನುಬದ್ಧ ಅಧಿಕಾರವಿರುವುದಿಲ್ಲ. ಇದನ್ನು ಬಲವಂತವಾಗಿ ಅಥವಾ ಬೆದರಿಕೆಯಿಂದ ಸಾಧಿಸಬೇಕಾಗಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ. ಇರಾನಿನ ನೌಕಾಪಡೆ, ಜಲಸಂಧಿಗೆ ಪ್ರವೇಶವನ್ನು ನಿರ್ಬಂಧಿಸಲು ಪ್ರಯತ್ನಿಸಿದರೆ, ಅದು ಅಮೆರಿಕದ ಐದನೇ ನೌಕಾಪಡೆ ಮತ್ತು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಇತರ ಪಾಶ್ಚಿಮಾತ್ಯ ನೌಕಾಪಡೆಗಳಿಂದ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಹಾರ್ಮುಜ್ ಅನ್ನು ಮುಚ್ಚುವುದರಿಂದ ಇರಾನ್ ಮೇಲೆ ಆರ್ಥಿಕವಾಗಿಯೂ ಪರಿಣಾಮ ಬೀರುತ್ತದೆ. ಏಕೆಂದರೆ, ಇದು ಟೆಹರಾನ್ ತನ್ನ ಪೆಟ್ರೋಲಿಯಂ ಅನ್ನು ರಫ್ತು ಮಾಡುವುದನ್ನು ತಡೆಯುತ್ತದೆ.
ಬ್ಲೂಮ್ಬರ್ಗ್ ನ್ಯೂಸ್ ಪ್ರಕಾರ, ಇರಾನ್ ತನ್ನ ತೈಲ ರಫ್ತಿಗೆ ಸಾಗಣೆಯನ್ನು ಅವಲಂಬಿಸಿದೆ, ಜಲಸಂಧಿಯ ಪೂರ್ವ ತುದಿಯಲ್ಲಿರುವ ಜಾಸ್ಕ್ನಲ್ಲಿ ರಫ್ತು ಟರ್ಮಿನಲ್ ಇದೆ. ಹೀಗಾಗಿ, ಜಲಸಂಧಿಯನ್ನು ಮುಚ್ಚಿದರೆ, ಇರಾನ್ಗೂ ನಷ್ಟವಾಗಲಿದೆ. ಅಲ್ಲದೆ, ಇಂತಹ ಕ್ರಮವು ಚೀನಾವನ್ನು ಕೂಡ ಗೊಂದಲಗೊಳಿಸುತ್ತದೆ. ಏಕೆಂದರೆ, ಅದು ಇರಾನಿನ ತೈಲದ ಅತಿದೊಡ್ಡ ಖರೀದಿದಾರ ಮತ್ತು ಪಾಶ್ಚಿಮಾತ್ಯ ನೇತೃತ್ವದ ನಿರ್ಬಂಧಗಳು ಅಥವಾ ನಿರ್ಣಯಗಳನ್ನು ಎದುರಿಸದಂತೆ ಇರಾನ್ ಅನ್ನು ರಕ್ಷಿಸಲು ಯುಎನ್ ಭದ್ರತಾ ಮಂಡಳಿಯಲ್ಲಿ ತನ್ನ ವೀಟೋ ಅಧಿಕಾರವನ್ನು ಬಳಸಿದ ಪ್ರಮುಖ ಪಾಲುದಾರ. (ಏಜೆನ್ಸೀಸ್)