ತೈಲ ಆಮದು ಮೊತ್ತ ಹೆಚ್ಚಳ ನಿರೀಕ್ಷೆ

Crude Oil
Published on

ನವದೆಹಲಿ: ಅಮೆರಿಕದ ಬೆದರಿಕೆಗೆ ಪ್ರತಿಯಾಗಿ ರಷ್ಯಾದ ಕಚ್ಚಾ ತೈಲದಿಂದ ದೂರ ಸರಿಯುವುದು ಭಾರತಕ್ಕೆ ಅನಿವಾರ್ಯವಾದರೆ, ದೇಶದ ವಾರ್ಷಿಕ ತೈಲ ಆಮದು ಮೊತ್ತ 9-11 ಶತಕೋಟಿ ಡಾಲರ್​ನಷ್ಟು ಏರಿಕೆಯಾಗಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾದ ಭಾರತ, 2022ರ ಫೆಬ್ರವರಿಯಿಂದಲೂ ರಷ್ಯಾದಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಸಾಕಷ್ಟು ಲಾಭವನ್ನೂ ಮಾಡಿಕೊಂಡಿದೆ. ಯೂಕ್ರೇನ್ ಯುದ್ಧಕ್ಕಿಂತ ಮೊದಲು ಭಾರತದ ಆಮದಿನಲ್ಲಿ ರಷ್ಯಾ ತೈಲದ ಪ್ರಮಾಣ ಶೇ. 0.2ಕ್ಕಿಂತ ಕಡಿಮೆ ಇತ್ತು. ಈಗ ಶೇ. 35-40ರಷ್ಟಾಗಿದೆ. ಒಟ್ಟಾರೆ ಇಂಧನ ಆಮದು ವೆಚ್ಚ ಕಡಿಮೆ ಮಾಡಲು, ಚಿಲ್ಲರೆ ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಇದು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದೆ. ರಷ್ಯಾದ ಕಚ್ಚಾ ತೈಲವನ್ನು ಭಾರತ ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ರಷ್ಯಾದಿಂದ ನೇರ ಆಮದಿಗೆ ನಿರ್ಬಂಧ ಹೊಂದಿರುವ ದೇಶಗಳಿಗೂ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಇದರಿಂದ ಭಾರತೀಯ ತೈಲ ಕಂಪನಿಗಳು ದಾಖಲೆಯ ಲಾಭ ಗಳಿಸಿವೆ.

ಟ್ರಂಪ್ ಕ್ರಮದಿಂದಾಗಿ ಇದೆಲ್ಲವೂ ಈಗ ತಿರುವುಮುರುವಾಗಲಿದೆ. ಇದಲ್ಲದೆ ಇತ್ತೀಚೆಗೆ ರಷ್ಯಾ ಮೂಲದ ಕಚ್ಚಾ ತೈಲದಿಂದ ಸಂಸ್ಕರಿಸಿದ ಉತ್ಪನ್ನಗಳ ಆಮದಿಗೆ ಐರೋಪ್ಯ ಒಕ್ಕೂಟವೂ ನಿಷೇಧ ಹೇರಿದೆ. ಅದು 2026ರ ಜನವರಿಯಿಂದ ಜಾರಿಗೆ ಬರಲಿದೆ. ಹೀಗಾಗಿ ಭಾರತೀಯ ಕಂಪನಿಗಳಿಗೆ ಎರಡೆರಡು ಸಮಸ್ಯೆಗಳು ತಲೆದೋರಿದಂತಾಗಿದೆ. ಭಾರತ ತನ್ನ ರಫ್ತನ್ನು ಆಗ್ನೇಯ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಕ್ಕೆ ತಿರುಗಿಸುವುದು ಕಾರ್ಯಾಚರಣೆ ದೃಷ್ಟಿಯಿಂದ ಸಾಧ್ಯವೆನಿಸಿದರೂ, ಈ ಬದಲಾವಣೆಯಿಂದ ಪ್ರಯಾಣದ ಸಮಯ ದೀರ್ಘವಾಗುತ್ತದೆ. ಲಾಭದ ಪ್ರಮಾಣ ಕಡಿಮೆ ಆಗುತ್ತದೆ. ವಾಣಿಜ್ಯಿಕವಾಗಿ ಆಕರ್ಷಕವೂ ಅಲ್ಲ ಎಂದು ಕೆಪ್ಲರ್​ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ಹೇಳಿದ್ದಾರೆ.

ರಷ್ಯಾದ ಕಚ್ಚಾ ತೈಲದ ಬದಲು ಬೇರೆಡೆಯಿಂದ ತರಿಸಿಕೊಳ್ಳುವುದು ಸರಳವಲ್ಲ. ಮಧ್ಯಪ್ರಾಚ್ಯಕ್ಕೆ ಅದರದೇ ಆದ ಸೀಮಿತತೆಗಳಿವೆ. ಒಪ್ಪಂದದ ಷರತ್ತು, ಬೆಲೆಯ ಏರಿಳಿತ, ಕಚ್ಚಾ ತೈಲದ ಗುಣಮಟ್ಟ ಮುಂತಾದ ಸಮಸ್ಯೆಗಳಿವೆ. ಇದರಿಂದಾಗಿ ಲಾಭದ ಪ್ರಮಾಣದ ಮೇಲೆ ಪರಿಣಾಮ ಉಂಟಾಗುತ್ತದೆ. ಸಂಸ್ಕರಣಾ ಕಂಪನಿಗಳಿಗೆ ಕಚ್ಚಾ ವಸ್ತು ವೆಚ್ಚ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net