ಹೆದ್ದಾರಿ ಪರಿಶೀಲಿಸಿದ ಅಧಿಕಾರಿಗಳು

pdb
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಪರಿಶೀಲನಾ ಸಭೆ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸಾರ್ವಜನಿಕರೊಂದಿಗೂ ಚರ್ಚಿಸಿದ ವೃತ್ತ ನಿರೀಕ್ಷಕಿ ಜಯಶ್ರೀ ಅವರು, ಪಾದಚಾರಿಗಳ ಅವಘಡಗಳ ತಡೆಗಾಗಿ ಪಡುಬಿದ್ರಿ, ಉಚ್ಚಿಲ ಹಾಗೂ ಮೂಳೂರುಗಳಲ್ಲಿ ಬ್ಯಾರಿಕೇಡ್‌ಗಳ ಅಳವಡಿಕೆ ಮಾಡಲಾಗುತ್ತದೆ. ಜತೆಗೆ ಹೆದ್ದಾರಿ ದಾಟಲು ಪಾದಚಾರಿಗಳಿಗೆ ಅನುಕೂಲವಾಗುವಂತೆ ರೈಲಿಂಗ್‌ಗಳ ಅಳವಡಿಕೆ, ಮಂಗಳೂರು ಕಡೆಯಿಂದ ಕಾರ್ಕಳ-ಪಡುಬಿದ್ರಿ ಹದ್ದಾರಿಯಲ್ಲಿ ಟ್ರಾಫಿಕ್ ಡೈವರ್ಶನ್ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಹೆದ್ದಾರಿಗಳಲ್ಲಿರುವ ಬೀದಿದೀಪಗಳನ್ನು ಸುಸ್ಥಿತಿಯಲ್ಲಿಡುವುದು, ಅಗತ್ಯವಿರುವಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ, ಪಡುಬಿದ್ರಿಯಲ್ಲಿ ರಿಕ್ಷಾ ನಿಲುಗಡೆಗೆ ವ್ಯವಸ್ಥೆ ಸಹಿತ ವಿವಿಧ ಕ್ರಮಕೈಗೊಳ್ಳುವ ಕುರಿತು ಚರ್ಚಿಸಲಾಗಿದ್ದು, ನೆರವು ನೀಡುವುದಾಗಿ ಪೊಲೀಸ್ ಇಲಾಖೆಯೂ ಭರವಸೆ ನೀಡಿದೆ. ಪಡುಬಿದ್ರಿಯಲ್ಲಿ ಯೋಜನಾ ನಿರ್ದೇಶಕ ಜಾದ್ ಜತೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದರು. ವೃತ್ತನಿರೀಕ್ಷಕಿ ಜಯಶ್ರೀ ಸ್ಥಳೀಯರನ್ನು ಸಮಾಧಾನಿಸಿದರು.

ಪ್ರಾಥಮಿಕ ಹಂತದಲ್ಲಿರುವ ಪಡುಬಿದ್ರಿ ಫ್ಲೈ ಓವರ್ ಪ್ರಸ್ತಾವನೆ ಕುರಿತು ಮುಂದಿನ ದಿನಗಳಲ್ಲಿ ಕೇಂದ್ರ ರಸ್ತೆ ಸಾರಿಗೆ ಇಲಾಖೆ ನೇಮಿಸುವ ತಂಡವು ಸಾರ್ವಜನಿಕರ ಸಮ್ಮುಖದಲ್ಲೇ ಡಿಪಿಆರ್, ಭೂಸ್ವಾಧೀನ ಮಾಹಿತಿ ಕಲೆಹಾಕಿ ಬಳಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುವುದು. ಆರ್ಥಿಕ ಇಲಾಖೆಯ ಸಮ್ಮತಿ ಬಳಿಕ ಯೋಜನೆಗಳ ಅನುಷ್ಠಾನ ವಿವಿಧ ಹಂತಗಳಲ್ಲಿ ನೆರವೇರಲಿದೆ ಜಾವೇದ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net