

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 4 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಕರೆದಿರುವ ಪ್ಯಾಕೇಜ್ ಟೆಂಡರ್ನಲ್ಲಿನ ಲೋಪವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೂ. 15ರಂದು ವಿಜಯವಾಣಿಯ ವಿಸõತ ವರದಿ ಬೆನ್ನಲ್ಲೇ ಈ ಕ್ರಮವಾಗಿದೆ. ಪರಿಣಾಮ ಭಾಗಶಃ ಮರು ಟೆಂಡರ್ ಕರೆಯುವುದು ನಿಕ್ಕಿಯಾಗಿದೆ.
ರಾಜ್ಯದ ಉದ್ದಗಲಕ್ಕೂ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸುವ, ವಿಸ್ತರಿಸುವ ವಿವಿಧ ಹಂತದ 314 ಕಾಮಗಾರಿ ಕೈಗೊಳ್ಳಲು ಅನುಮೋದನೆ ಸಿಕ್ಕಿತ್ತು. ಅದರ ಪ್ರಕಾರ 202 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಫಿಕ್ಸಿಂಗ್, ಕಿಕ್ಬ್ಯಾಕ್ ಶಂಕೆ ವ್ಯಕ್ತವಾಗಿತ್ತು. ಈ ಕುರಿತು ವಿಜಯವಾಣಿ ವಿಸõತ ವರದಿ ಮಾಡಿದ ಬೆನ್ನಲ್ಲೇ ಕಳೆದ ಮೂರು ದಿನಗಳಿಂದ ಉನ್ನತ ಅಧಿಕಾರಿಗಳ ತಂಡ ಪ್ರತಿ ಟೆಂಡರ್ ಪ್ರಕ್ರಿಯೆ ಪರಿಶೀಲಿಸುತ್ತಿದೆ. ಗುತ್ತಿಗೆದಾರರು ನೀಡಿದ ದಾಖಲೆ ಪರಿಶೀಲಿಸಿದೆ. ಮಾಹಿತಿಗಳ ಪ್ರಕಾರ 86 ಪ್ಯಾಕೇಜ್ ಟೆಂಡರ್ ಪರಿಶೀಲನೆ ನಡೆಸಿದ್ದು, ಈ ಪೈಕಿ 30 ಗುತ್ತಿಗೆದಾರರು ಸಲ್ಲಿಸಿರುವ ದಾಖಲೆ ನಕಲಿಯಾಗಿವೆ. ಈ ಮೂಲಕ ಅವರು ಟೆಂಡರ್ನಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಇಬ್ಬರೇ ಗುತ್ತಿಗೆದಾರರು ಭಾಗವಹಿಸಿದ್ದ ಟೆಂಡರ್ನಲ್ಲಿ ಒಬ್ಬರು ಅರ್ಹತೆ ಪಡೆದುಕೊಳ್ಳದೇಹೋದರೆ ಇನ್ನೊಬ್ಬರಿಗೆ ಅವಕಾಶ ಕೊಡಲು ಬರುವುದಿಲ್ಲ. ಹೀಗಾಗಿ ಮೂವತ್ತು ಟೆಂಡರ್ ರದ್ದುಪಡಿಸಿ ಪುನಃ ಕರೆಯಲು ನಿರ್ಧರಿಸಲಾಗಿದೆ.
ಉಳಿದ 120 ಪ್ಯಾಕೇಜ್ ಟೆಂಡರ್ ಪರಿಶೀಲನೆ ಶೀಘ್ರವೇ ನಡೆಯಲಿದ್ದು, ಮತ್ತಷ್ಟು ಗುತ್ತಿಗೆದಾರರು ರೇಸ್ನಿಂದ ಹೊರಬೀಳುವ ಸಾಧ್ಯತೆ ಇದೆ. ಈ ಮೂಲಕ ದೊಡ್ಡ ಮಟ್ಟದ ಫಿಕ್ಸಿಂಗ್ ಕಾರ್ಯವನ್ನು ತೊಡೆದುಹಾಕಿದಂತಾಗುತ್ತದೆ. ಲೋಕೋಪಯೋಗಿ ಸಚಿವರ ಸ್ಪಷ್ಟ ಸೂಚನೆ ಮೇರೆಗೆ ಪ್ರತಿ ಟೆಂಡರ್ ದಾಖಲೆಯನ್ನು ಗಂಭೀರವಾಗಿ ಅವಲೋಕನ ನಡೆಸಿರುವುದು ವಿಶೇಷ. ಈ ಹಿಂದೆ ಕೆಲಸ ಮಾಡಿದ ಪ್ರಮಾಣ ಪತ್ರದ ಅಸಲಿಯತ್ತು ಹಾಗೂ ಹಿಂದಿನ ವರ್ಷದ ವಹಿವಾಟು ಪ್ರಮಾಣ ಪತ್ರದ ಅಸಲಿಯತ್ತು ಪರಿಶೀಲನೆ ಒತ್ತು ನೀಡಲಾಗಿದೆ.
ಎಸ್ಎಚ್ಡಿಪಿಗೆ ವಿರೋಧ: ಲೋಕೋಪಯೋಗಿ ಇಲಾಖೆ ಎಲ್ಲ ಕೆಲಸ ಮಾಡುವಾಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯೆಂಬ ಗಂಜಿ ಕೇಂದ್ರವನ್ನು ಟೆಂಡರ್ ಕರೆಯಲು ಹಣ ಬಿಡುಗಡೆ ಮಾಡಲು ಮಾತ್ರ ಬಳಸುತ್ತಿರುವುದಕ್ಕೆ ರಾಜ್ಯ ಗುತ್ತಿಗೆದಾರರಿಂದ ವ್ಯಾಪಕ ಆಕ್ರೋಶವ್ಯಕ್ತವಾಗಿದೆ. ಕಾಂಗ್ರೆಸ್ ಸರ್ಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಸಂಕಲ್ಪ ಮಾಡಿರುವುದರಿಂದ ಬಿಳಿಯಾನೆಯಂತೆ ಕೆಲವೇ ಕೆಲವರಿಗೆ ಆಶ್ರಯ ನೀಡಿರುವ ಎಸ್ಎಚ್ಡಿಪಿಯನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.
ಕ್ರಮದ ಕುತೂಹಲ?: ಟೆಂಡರ್ನಲ್ಲಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡದ ಅಥವಾ ನಕಲಿ ದಾಖಲೆ ಸಲ್ಲಿಸಿದ ಗುತ್ತಿಗೆದಾರರ ವಿರುದ್ಧ ಸರ್ಕಾರ ಯಾವ ಕ್ರಮಕೈಗೊಳ್ಳುತ್ತದೆ ಎಂಬ ಕುತೂಹಲವೂ ಇದೆ. ಅಂತಹ ಗುತ್ತಿಗೆದಾರರನ್ನು ಕಪು್ಪ ಪಟ್ಟಿಗೆ ಸೇರಿಸುತ್ತದೆಯೇ? ಕ್ರಿಮಿನಲ್ ಪ್ರಕರಣ ದಾಖಲಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಇಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳುತ್ತಿರುವ ಕಾರಣ ಪರಿಶಿಷ್ಟರಿಗೆ ಮೀಸಲು ಪಾಲನೆ ಮಾಡದೇ ಇದ್ದರೆ ಭವಿಷ್ಯದಲ್ಲಿ ಅನುದಾನ ಬಿಡುಗಡೆಗೆ ಅಡ್ಡಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ ಎಂಬ ವಾದವಿದೆ.
| ಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಇದೊಂದು ಭ್ರಷ್ಟ ಸರ್ಕಾರ. ನಿರ್ದಿಷ್ಟ ವ್ಯಕ್ತಿಗಳಿಗೆ ಟೆಂಡರ್ ಹಂಚಿಕೆ ಮಾಡಿ ದೊಡ್ಡ ಮಟ್ಟದಲ್ಲಿ ಹಣ ಮಾಡಲು ಹೊರಟಿದೆ. ಪ್ರತಿ ಹಂತದಲ್ಲಿ ಹಗಲು ದರೋಡೆಗೆ ನಿಂತಿದೆ. ಇದಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ನಡೆದ ಬೆಳವಣಿಗೆ ತಾಜಾ ಉದಾಹರಣೆ. ಈ ವಿಷಯವನ್ನು ಅಧಿವೇಶನದಲ್ಲಿ ತೆಗೆದುಕೊಳ್ಳುತ್ತೇವೆ, ಸರ್ಕಾರದ ಬಂಡವಾಳ ಬಯಲು ಮಾಡುತ್ತೇವೆ.
| ಎನ್.ರವಿಕುಮಾರ್ ವಿಧಾನಪರಿಷತ್ ಸದಸ್ಯ