

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾನುವಾರ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಅರಮನೆಯಲ್ಲಿರುವ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಅರಮನೆ ಎಸಿಪಿ ಚಂದ್ರಶೇಖರ್ ಇತರರಿದ್ದರು.