

ತನ್ನ ಅಮ್ಮನೊಂದಿಗೆ ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ, ಏಳು ಬಾತುಕೋಳಿಯ ಮರಿಗಳು ರಸ್ತೆಪಕ್ಕದಲ್ಲಿದ ಚರಂಡಿಗೆ ಬಿದ್ದಿದ್ದು, ರಕ್ಷಣಾ ಅಧಿಕಾರಿಗಳು ಚರಂಡಿಗೆ ಬಿದ್ದ ಮರಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಾತುಕೋಳಿಯೊಂದು ತನ್ನ ಎಂಟು ಮರಿಗಳೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ, ಅಚಾನಕ್ಕಾಗಿ ಏಳು ಮರಿಗಳು ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದು, ಒಂದು ಮರಿ ಮಾತ್ರ ತಾಯಿಯ ಬಳಿ ಉಳಿದುಕೊಂಡಿತ್ತು. ಆಗ ತಾಯಿ ಬಾತುಕೋಳಿ ತನ್ನ ಮಕ್ಕಳು ಬಿದ್ದ ಜಾಗದ ಹತ್ತಿರದಲ್ಲೇ ಅತ್ತಿಂದಿತ್ತ ಓಡಾಡಿಕೊಂಡಿದೆ. ಮರಿಗಳು ತಮ್ಮ ರಕ್ಷಣೆಗಾಗಿ ಚರಂಡಿ ಒಳಗಿಂದಲೇ ಕೂಗಿಕೊಂಡಿವೆ. ಆದರೆ ತಾಯಿಗೆ ತನ್ನ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಈ ವೇಳೆ ರಸ್ತೆ ಬದಿಯ ಫುಟ್ಬಾತ್ನಲ್ಲಿ ತನ್ನ ಒಂದು ಮರಿಯೊಂದಿಗೆ ಅತ್ತಿಂದಿತ್ತ ಓಡಾಡಿಕೊಂಡಿದ್ದ ಬಾತುಕೋಳಿಯ ವಿಚಿತ್ರ ವರ್ತನೆಯನ್ನು ನೋಡಿದ ಪೊಲೀಸ್ ಅಧಿಕಾರಿಗಳು ಅನುಮಾನ ಬಂದು, ಹತ್ತಿರ ಹೋದಾಗ ವಿಷಯ ಗೊತ್ತಾಗಿದೆ. ಕೂಡಲೇ ಅಧಿಕಾರಿಗಳು ಚರಂಡಿಯ ಮುಚ್ಚಳಚವನ್ನು ತೆಗೆದು, ತಾವೇ ಕೈ ಹಾಕಿ ಏಳು ಬಾತು ಮರಿಗಳನ್ನು ಮೇಲೆ ತೆಗೆದಿದ್ದಾರೆ. ಈ ವೇಳೆ ತಾಯಿ ಬಾತುಕೋಳಿ ಅಧಿಕಾರಿಗಳ ಕಾರ್ಯಾಚರಣೆಯನ್ನು ಅಲ್ಲಿಯೇ ಕುಳಿತು ನೋಡುತ್ತಿತ್ತು. ನಂತರ ಅಧಿಕಾರಿಗಳು ತಾಯಿ ಬಾತುಕೋಳಿಯೊಂದಿಗೆ ಅದರ ಎಲ್ಲಾ ಮರಿಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ನದಿಗೆ ಬಿಟ್ಟಿದ್ದಾರೆ. ತಾಯಿಯ ಹಿಂದೆ ಒಂದೊಂದಾಗಿ ಮರಿಗಳು ಖುಷಿಯಿಂದ ನದಿಯತ್ತ ಹೋಗಿ ನೀರಿನಲ್ಲಿ ತೇಲಿವೆ. ಅಧಿಕಾರಿಗಳ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.