ಅಧಿಕಾರಿಗಳೇ ಜನರ ಬಳಿ ತೆರಳಿ..: ಎಲ್ಲ ಇಲಾಖಾ ಮುಖ್ಯಸ್ಥರಿಗೆ ಸಿಎಂ ಬೊಮ್ಮಾಯಿ ಸೂಚನೆ, ಶೇ.5 ಉಳಿತಾಯಕ್ಕೆ ತಾಕೀತು

CM Bommai
ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಜನತಾದರ್ಶನ ನಡೆಸಿದರು.
Published on

ಬೆಂಗಳೂರು: ಬಜೆಟ್​ನಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಬೇಕು. ಮುಂದಿನ ಸಭೆಯೊಳಗಾಗಿ ಆಯಾ ಇಲಾಖೆಯಲ್ಲಿ ನಿಗದಿತ ಪ್ರಗತಿ ಸಾಧನೆ ಆಗಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದ್ದಾರೆ.

ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೆ ಘೋಷಣೆ ಮಾಡಿರುವಂತೆ ಪ್ರತಿ ಇಲಾಖೆಯಲ್ಲಿ ಶೇ.5 ಉಳಿತಾಯ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜನರು ಅಭಿವೃದ್ಧಿ ಸುತ್ತ ಸುತ್ತುವುದಲ್ಲ, ಅಭಿವೃದ್ಧಿ ಜನರಿದ್ದ ಕಡೆ ಆಗಬೇಕು. ಆದ್ದರಿಂದ ಇಲಾಖೆ ಮುಖ್ಯಸ್ಥರು ಜಿಲ್ಲಾ ಮತ್ತು ತಾಲೂಕುಗಳಿಗೆ ಭೇಟಿ ನೀಡಬೇಕು ಎಂದರು.

ಸರ್ಕಾರದ ಕಾರ್ಯದರ್ಶಿಗಳು ಜಿಲ್ಲೆ, ತಾಲೂಕು, ಹಳ್ಳಿಗಳಿಗೆ ಭೇಟಿ ನೀಡಬೇಕು. ಇಲಾಖೆಯ ಕಾರ್ಯಕ್ರಮ ಅನುಷ್ಠಾನವನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ತೊಡಕುಗಳಿದ್ದಲ್ಲಿ, ಸ್ಥಳದಲ್ಲಿಯೇ ಬಗೆಹರಿಸಬೇಕು. ಆಗ ಜನರ ಬಳಿಗೆ ಸರ್ಕಾರ ಹೋದಂತಾಗುತ್ತದೆ. ಜನ ಇದ್ದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ, ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ಜನಸಾಮಾನ್ಯರ ಕೆಲಸಗಳಲ್ಲಿ ತಡ ಆಗಬಾರದು. ಅವರು ಕಚೇರಿಗಳಿಗೆ ಭೇಟಿ ನೀಡಿದಾಗ ಗೌರವ, ಸೌಜನ್ಯದಿಂದ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಡತ್ವ ಒಂದೇ ದಿನದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ಈ ಬದಲಾವಣೆ ತರುವಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದುದು. ಧೈರ್ಯವಾಗಿ ಜನಪರ ಕೆಲಸ ಮಾಡಬೇಕು. ಆಡಳಿತದಲ್ಲಿ ಬದಲಾವಣೆ ಬಂದರೆ, ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದರು.

ಆಡಳಿತ ಸುಧಾರಣೆಗೆ ಕ್ರಮ: ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಕೆಲ ಸುಧಾರಣೆ ತರುವ ಶಿಫಾರಸು ಮಾಡಿದ್ದಾರೆ. ಇದರ ಅನುಷ್ಠಾನಕ್ಕೆ ಸಲಹಾ ಸಮಿತಿ ರಚನೆ ಮಾಡುತ್ತೇವೆ. ನ.1 ರಿಂದ ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ಹೇಳಿದರು.

ಸ್ವಚ್ಛ ಭಾರತಕ್ಕೆ ಒತ್ತು: ಪ್ರಧಾನಿ ಮೋದಿ ಅವರ ಕನಸಿನ ಸ್ವಚ್ಛ ಭಾರತ ಯೋಜನೆ ಬಹಳ ಮಹತ್ವದ್ದು ಈ ಯೋಜನೆಯ ಅನುಷ್ಠಾನದಲ್ಲಿ ನಾವು ಹಿಂದೆ ಬೀಳಬಾರದು. ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗಳ್ಳುವಂತೆ ನೋಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು.

ಕೆಡಿಪಿಗೆ ಮೊದಲ ಮುಖ್ಯಮಂತ್ರಿ: ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಗಳು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯುವುದು ರೂಢಿ. ಆದರೆ, ಈ ಬಾರಿ ಕೆಡಿಪಿ ಸಭೆಗೆ ಮುಖ್ಯಮಂತ್ರಿಗಳೇ ಆಗಮಿಸಿ ಪ್ರಗತಿ ಪರಿಶೀಲನೆ ಮಾಡಿದರು. ಕೆಡಿಪಿ ಸಭೆಯಲ್ಲಿ ಪಾಲ್ಗೊಂಡ ಮೊದಲ ಸಿಎಂ ಬಸವರಾಜ ಬೊಮ್ಮಾಯಿ ಎನ್ನುವುದು ವಿಶೇಷ.

ಸಿಎಂ ಮತ್ತೆ ದೆಹಲಿಗೆ: ವಿಧಾನಸಭೆ ಅಧಿವೇಶನಕ್ಕೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಸೆ.8ರಂದು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಅವರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ತೆರಳಲಿದ್ದಾರೆ. ದೆಹಲಿ ಭೇಟಿ ವೇಳೆ ಸಹಜವಾಗಿ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡುವ ಜತೆಗೆ ಪಕ್ಷದ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ. ಈ ಬಾರಿ ಭೇಟಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಇಂದು ಹಾವೇರಿ ಪ್ರವಾಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಗೆ ಬುಧವಾರ ಭೇಟಿ ನೀಡಲಿದ್ದಾರೆ. ಇಡೀ ದಿನ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಾಸ್ತವ್ಯ ಹೂಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಹಲವು ಹಿರಿಯ ನಾಯಕರು ಸೆ.2ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹೀಗಾಗಿ ಮುನ್ನಾ ದಿನವೇ ಬೊಮ್ಮಾಯಿ ಬಿಡಾರ ಹೂಡಲಿದ್ದು, ಗುರುವಾರದ ಪ್ರವಾಸ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಪ್ರಲ್ಹಾದ ಜೋಶಿ ಪುತ್ರಿಯ ವಿವಾಹ ಆರತಕ್ಷತೆಯ ಕಾರ್ಯಕ್ರಮದಲ್ಲಿ ಅಮಿತ್ ಷಾ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇನ್ನಿತರ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.

ಕೇಂದ್ರದ ಯೋಜನೆಗೆ ಒತ್ತು ನೀಡುವಂತೆ ಸಲಹೆ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಪಾಲು ಬಿಡುಗಡೆಯಾದ ಕೂಡಲೆ ರಾಜ್ಯದ ಪಾಲನ್ನೂ ಬಿಡುಗಡೆ ಮಾಡಿ, ಜನರಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಕೇಂದ್ರದ ಅನುದಾನ ಸದ್ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕೆಂದು ಸೂಚಿಸಲಾಗಿದೆ ಎಂದು ಕೆಡಿಪಿ ಸಭೆ ಬಳಿಕ ಸಿಎಂ ತಿಳಿಸಿದರು. ಹಲವು ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಆದ್ಯತೆ ಮೇರೆಗೆ ವಿಲೇ ಮಾಡುವಂತೆ ಸೂಚಿಸಲಾಗಿದೆ. ನ್ಯಾಯಾಲಯ ಪ್ರಕರಣಗಳು ಹೆಚ್ಚಿರುವ ಇಲಾಖೆಗಳಲ್ಲಿ ಉಪ ಕಾರ್ಯದರ್ಶಿ ಅಥವಾ ಅಧೀನ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ, ಕಾನೂನು ಇಲಾಖೆ ಮತ್ತು ವಕೀಲರ ತಂಡದೊಂದಿಗೆ ಸಮನ್ವಯ ಸಾಧಿಸಿ, ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net