

ಬೆಂಗಳೂರು: ನೀವು ಸರ್ಕಾರದ ಮುಖ. ನಿಮ್ಮ ಕಾರ್ಯವೈಖರಿ ಸರ್ಕಾರದ ಹಣೆಬರಹ ನಿರ್ಧರಿಸುತ್ತದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ರೆವಿನ್ಯು ಇನ್ಸ್ಪೆಕ್ಟರ್‌ಗಳು, ಪಿಡಿಓಗಳು ಕಾರ್ಯವೈಖರಿ ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರ ಬಗ್ಗೆ ಗಮನ ಹರಿಸಿ ಎಂದು ಸೂಚಿಸಿದರು.
ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡೋದು ಬೇಡ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಕಾರ ನೀಡಿದ್ದೀರಿ. ಅದಕ್ಕೆ ಅಭಿನಂದನೆಗಳು ಎಂದರು.
ಶೇಕಡಾ 70 ರಷ್ಟು ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿಲ್ಲ. ಇದರಿಂದ ಅವರು ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದಲೂ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಎಚ್ಚರಿಸಿದರು.
ಅಧಿಕಾರಿಗಳಿಗೆ ಸಿಇಓ ಗಳು ಬದ್ಧತೆ ನಿಗದಿ ಮಾಡಬೇಕು. 15 ದಿನದೊಳಗೆ ಅಧಿಕಾರಿಗಳು ಕೆಲಸದ ಕೇಂದ್ರ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ವಿಳಾಸದ ಡೈರಿ ಮಾಡಿ ಸಾರ್ವಜನಿಕರ ಗಮನಕ್ಕೆ ತರಬೇಕು. ಕೇಂದ್ರ ಸ್ಥಳದಲ್ಲಿ ಉಳಿಯಲು ಆಗದವರು ಜಾಗ ಖಾಲಿ ಮಾಡಬೇಕು ಎಂದು ತಾಕೀತು ಮಾಡಿದರು.
ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ. ಆರ್ ಟಿ ಐ ದುರ್ಬಳಕೆಗೂ ಅವಕಾಶ ಕೊಡಬೇಡಿ. ನಿಮ್ಮ ಮೇಲೆ ಹೆಚ್ಚು ನಿರೀಕ್ಷೆ ಇದೆ. ನರೇಗಾ ಹಣ ಸದ್ಭಳಕೆ ಮಾಡಿ. ಸಮರ್ಪಕ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ. ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದರು.
ಸಿ ಎಸ್ ಆರ್ ಫಂಡ್ ಸದ್ಬಳಕೆಗೆ ಶ್ರಮಿಸಿ. ಮೂರು ಗ್ರಾಮ ಪಂಚಾಯಿತಿಗೆ ಒಂದು ಪಬ್ಲಿಕ್ ಮಾದರಿ ಶಾಲೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸಿ ಎಸ್ ಆರ್ ಫಂಡ್ ನಿಂದ ಕಟ್ಟಡ ಕಟ್ಟಿಕೊಡುತ್ತಾರೆ. ಪಬ್ಲಿಕ್ ಶಾಲೆಗಳ ಆಡಳಿತ ಮಂಡಳಿ ದತ್ತು ತೆಗೆದುಕೊಂಡು ಬೋಧನೆಗೆ ವ್ಯವಸ್ಥೆ ಮಾಡಿಕೊಡಲಿವೆ ಎಂದು ವಿವರಿಸಿದರು.
ರಾಜ್ಯದ ಕೆಲವು ಉದ್ಯಮಗಳು ಸಿ ಎಸ್ ಆರ್ ಫಂಡ್ ಅನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿವೆ. ಅದನ್ನು ತಡೆದು ನಮ್ಮಲ್ಲೇ ಬಳಕೆ ಮಾಡಲು ನೀವೆಲ್ಲರೂ ನಿಗಾ ವಹಿಸಬೇಕೆಂದರು.