ಸೋಲಿಗರಿಗೆ ಪೌಷ್ಟಿಕ ಆಹಾರ ವಿತರಣೆಗೆ ಕ್ರಮ

HUN-DEC-20-1(SC ST MEETING)
Published on

ಹುಣಸೂರು : ತಾಲೂಕಿನ ಗೋವಿಂದನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾಚಳ್ಳಿ ರಸ್ತೆಯ ವಿನಾಯಕನಗರದಲ್ಲಿ ಸೋಲಿಗ ಸಮಾಜದ 15 ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರು ಮಾಡುವ ಕುರಿತಂತೆ ಗಿರಿಜನ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ಕಾಲನಿಗೆ ಭೇಟಿ ನೀಡಿದ ವೇಳೆ ಹುಣಸೂರು ಉಪವಿಭಾಗ ಮಟ್ಟದ ಪ. ಜಾತಿ ಮತ್ತು ಪಂಗಡದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಮಾತನಾಡಿ, 15 ಸೋಲಿಗ ಕುಟುಂಬ ಹಲವು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿವೆ. ಈ ಕುಟುಂಬಗಳಿಗೆ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಕೊಡುತ್ತಿರುವ ಪೌಷ್ಟಿಕ ಆಹಾರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಆಯೋಜನೆಗೊಂಡಿದ್ದ ಉಪವಿಭಾಗ ಮಟ್ಟದ ಎಸ್ಸಿ, ಎಸ್ಟಿ ಜಾಗೃತಿ ಉಸ್ತುವಾರಿ ಸಭೆಯಲ್ಲಿ ವಿಷಯವನ್ನು ಉಪ ವಿಭಾಗಾಧಿಕಾರಿ ಗಮನಕ್ಕೆ ತರಲಾಗಿತ್ತು. ಕೂಡಲೇ ಈ ನಿರ್ಗತಿಕ ಸೋಲಿಗ ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರಾತಿ ಮಾಡುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿರುವುದು ಸ್ವಾಗತಾರ್ಹ ಎಂದರು.

ಶಿಫಾರಸ್ಸು ಮಾಡುವೆ: ಸಹಾಯಕ ನಿರ್ದೇಶಕ ಗಂಗಾಧರ ಮಾತನಾಡಿ ಈ ಕುಟುಂಬಗಳಿಗೆ ಅರಿವಿನ ಕೊರತೆಯಿಂದ ಪೌಷ್ಟಿಕ ಆಹಾರವನ್ನು ಪಡೆಯಲು ಮಾಹಿತಿ ಇಲ್ಲದೆ ಈ ಯೋಜನೆಯಿಂದ ಹೊರಗುಳಿದಿದ್ದಾರೆ. ನಿಂಗರಾಜ ಮಲ್ಲಾಡಿ ಈ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆ ಮಾಡಿದ್ದಾರೆ. ನಮ್ಮ ಇಲಾಖೆಯಿಂದ ಈ ಕುಟುಂಬಗಳ ದಾಖಲೆ ಪರಿಶೀಲಿಸಿ ಈ ನಿರ್ಗತಿಕ ಸೋಲಿಗ ಕುಟುಂಬಗಳಿಗೆ ಆಹಾರ ಮಂಜೂರು ಮಾಡಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡುವೆ ಎಂದರು. ಗ್ರಾ.ಪಂ. ಸದಸ್ಯರಾದ ಶಿವಲಿಂಗ, ನಂದೀಶ, ಗ್ರಾಮದ ಸೋಲಿಗ ಮಹಿಳೆಯರಾದ ಪುಟ್ಟಮ್ಮ, ನರಸಮ್ಮ, ಸೀತಮ್ಮ, ಗುರುಮಲ್ಲಮ್ಮ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net