24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಸರ್ಕಾರಿ ಕೆಲಸ ಕಳೆದುಕೊಂಡ ಮಹಿಳೆ..!

Odisha Woman
Published on

ಮಲ್ಕಂಗಿರಿ: ಒಡಿಶಾದ ಮಲ್ಕಂಗಿರಿಯಲ್ಲಿ ಸೀನಿಯರ್​ ಕ್ಲರ್ಕ್​ ಆಗಿರುವ ಮಹಿಳೆಯೊಬ್ಬಳು 24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಕೈತುಂಬ ಸಂಬಳ ಬರುತ್ತಿದ್ದ ಸರ್ಕಾರಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಕ್ಲರ್ಕ್​ ಲಕ್ಷ್ಮಿಪ್ರಿಯಾ ಬೆಹೆರಾ ಎಂಬಾಕೆಯನ್ನು ಮಲ್ಕಂಗಿರಿ ಜಿಲ್ಲಾಧಿಕಾರಿ ಯೆದ್ದುಲಾ ವಿಜಯ್​ ಕೆಲಸದಿಂದ ವಜಾಗೊಳಿಸಿದ್ದಾರೆ. 24 ವರ್ಷಗಳ ಹಿಂದೆ ಕೆಲಸಕ್ಕೆ ಸೇರುವಾಗ ನಕಲಿ ಎಸ್​ಟಿ ಪ್ರಮಾಣಪತ್ರ ನೀಡಿರುವ ಆರೋಪ ಕೇಳಿಬಂದು ಹಿನ್ನೆಲೆಯಲ್ಲಿ ಕೆಲಸದಿಂದ ಬೆಹೆರಾರನ್ನು ತೆಗೆದುಹಾಕಲಾಗಿದೆ.

ಇದಕ್ಕೂ ಮುನ್ನ ಒಡಿಶಾದ ದಕ್ಷಿಣ ಕಂದಾಯ ಆಯುಕ್ತರು ತನಿಖೆಯನ್ನು ಕೈಗೊಂಡಿದ್ದರು. ಇದೀಗ ತನಿಖಾ ವರದಿಯ ಆಧಾರದ ಮೇಲೆ ಬೆಹೆರಾರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್​ಇಬಿಸಿ)ದ ಬೆಹೆರಾ ಪರಿಶಿಷ್ಟ ಪಂಗಡ (ಎಸ್​ಟಿ)ದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆ ಬಳಿಕ ಗಂಡನ ಗುರುತಿನ ಆಧಾರದ ಮೇಲೆ ಎಸ್​ಟಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಸರಿಯಾದ ಪರಿಶೀಲನೆ ನಡೆಸದೇ ಜುನಾಗಢದ ತಹಸೀಲ್ದಾರ್​ ಎಸ್​ಟಿ ಪ್ರಮಾಣಪತ್ರವನ್ನು ವಿತರಣೆ ಮಾಡಿದ್ದರು. ಇದೇ ಪ್ರಮಾಣಪತ್ರ ಪಡೆದುಕೊಂಡು ಬೆಹೆರಾ ಸರ್ಕಾರಿ ಕೆಲಸವನ್ನು ಪಡೆದುಕೊಂಡಿದ್ದರು.

ಇದೀಗ 24 ವರ್ಷದ ಹಿಂದೆ ತಾನು ಮಾಡಿದ ತಪ್ಪಿನಿಂದಾಗಿ ಕೆಲಸದಿಂದ ವಜಾಗೊಂಡಿದ್ದಾರೆ. ಈ ಮೂಲಕ ಸರ್ಕಾರಿ ಉದ್ಯೋಗವನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net