

ಒಡಿಶಾ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆಘಾತಕಾರಿ ರೈಲು ದುರಂತದಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ದುರಂತದಲ್ಲಿ ಮಡಿದ ಹಲವಾರು ಜನರ ನೋವಿನ ಕತೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ತಂದೆಯೊಬ್ಬ ತನ್ನ ಮಗನನ್ನು ಶವಾಗಾರದಿಂದ ಹೊರತಂದು ಬದುಕಿಸಿರುವ ವಿಚಿತ್ರ ಘಟನೆ ನಡೆದಿದೆ.
ಹೌರಾ ನಿವಾಸಿ ಹೆಲರಾಮ್ ಎಂಬಾತ ತನ್ನ ಮಗ ಬಿಸ್ವಜಿತ್ ಮಲ್ಲಿಕ್ನನ್ನು ಶಾಲಿಮಾರ್ನಲ್ಲಿ ರೈಲು ಹತ್ತಿಸಿ ಮನೆಗೆ ವಾಪಸ್ಸಾಗಿದ್ದ. ಮನೆಗೆ ಬಂದ ಕೆಲಹೊತ್ತಿನ ಬಳಿಕ ರೈಲು ಅಪಘಾತದ ಸುದ್ದಿಯನ್ನು ತಿಳಿದ ಹೆಲರಾಮ್ ತನ್ನ ಮಗನಿಗೆ ಕರೆ ಮಾಡಿದ್ದ.
ಬಿಸ್ವಜಿತ್ ಕರೆಯನ್ನು ಸ್ವೀಕರಿಸಿ ನಾನು ಭೀಕರವಾಗಿ ಗಾಯಗೊಂಡಿದ್ದೇನೆ ಎಂದಷ್ಟೇ ಹೇಳಿದ್ದ. ಈ ಕಡೆಯಿಂದ ಹೆಲರಾಮ್ ತನ್ನ ಮಗನ ಜತೆಗೆ ಹೆಚ್ಚು ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಕೂಡಲೇ ಹೆಲರಾಮ್ ಖಾಸಗಿ ಆ್ಯಂಬುಲೆನ್ಸ್ ಬುಕ್ ಮಾಡಿ 230 ಕಿ.ಮೀ. ದೂರದಲ್ಲಿರುವ ಘಟನಾ ಸ್ಥಳಕ್ಕೆ ಹೋಗಿ ಮಗನನ್ನು ಹುಡುಕಾಡಿದ್ದ.
ಆದರೆ, ಮಗನು ಗಾಯಾಳುಗಳ ನಡುವೆ ಸಿಗದಿದ್ದಾಗ ದಿಕ್ಕುತೋಚದ ಹೆಲರಾಮ್ ಅಧಿಕಾರಿಗಳಿಗೆ ಮಗನ ಕುರಿತು ಹೇಳಿದ್ದಾನೆ. ಅದಕ್ಕೆ ಉತ್ತರವಾಗಿ ಅವರು, ಮಗನನ್ನು ಶವಾಗಾರದಲ್ಲಿ ಹುಡುಕುವಂತೆ ಹೇಳಿದ್ದಾರೆ. ಕೂಡಲೇ ತಾತ್ಕಾಲಿಕ ಶವಾಗಾರಕ್ಕೆ ತೆರಳಿದ ಹೆಲರಾಮ್ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ತಿಳಿಸಿ ಒಳ ನಡೆದು ಮಗನಿಗಾಗಿ ತಡಕಾಡಿದ್ದಾನೆ.
ನೂರಾರು ಶವಗಳ ನಡುವೆ ಮಗನನ್ನು ಹುಡುಕುವ ವೇಳೆ ಮೂಲೆಯೊಂದರಲ್ಲಿ ಯಾರದ್ದೋ ಕೈ ಅಲುಗಾಡಿದಂತೆ ಹೆಲರಾಮ್ನಿಗೆ ಭಾಸವಾಗಿದೆ. ತಕ್ಷಣವೇ ಹೆಲರಾಮ್ ಆ ಕಡೆ ಹೋಗಿದ್ದು, ಮಗನ ಕೈಯನ್ನು ನೋಡಿದ್ದಾನೆ.
ಕೂಡಲೇ ಹೆಲರಾಮ್, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗನ ಬಗ್ಗೆ ಅಲ್ಲಿನ ಸಿಬ್ಬಂದಿಗೆ ತಿಳಿಸಿ ತಾನು ಆಗಮಿಸಿದ ಆ್ಯಂಬುಲೆನ್ಸ್ ಮೂಲಕ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿಸ್ವಜಿತ್ನನ್ನು ಕೋಲ್ಕತಾಗೆ ರವಾನಿಸಿದ್ದು ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.(ಏಜೆನ್ಸೀಸ್)