

ಬಿಹಾರ: ಕೋವಿಡ್ ಬಗ್ಗೆ ಯಾರೂ ವಿಶೇಷವಾಗಿ ಹೇಳಬೇಕಾಗಿಲ್ಲ. ಈ ವೈರಸ್‌ನಿಂದಾಗಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತೀವ್ರ ತೊಂದರೆಗಳನ್ನು ಎದುರಿಸಿದ್ದಾರೆ. ಆದರೆ ಕೋವಿಡ್ ನೋವು ಬಹುತೇಕ ದೂರವಾಯಿತು ಎನ್ನುವಷ್ಟರಲ್ಲಿ ಸ್ಕ್ರಬ್ ಟೈಫಸ್ ಎಂಬ ವೈರಸ್ ಮಹಾಮಾರಿಯಂತೆ ಹರಡುತ್ತಿದೆ.
ಸದ್ಯ ಈ ಸೋಂಕಿನ ಪ್ರಭಾವ ಒಡಿಶಾ ರಾಜ್ಯದಲ್ಲಿ ಹೆಚ್ಚಿದೆ. ಒಡಿಶಾ ಆರೋಗ್ಯ ನಿರ್ದೇಶಕ ನಿರಂಜನ್ ಮಿಶ್ರಾ ಪ್ರಕಾರ, ಸ್ಕ್ರಬ್ ಟೈಫಸ್ ಸೋಂಕಿನಿಂದ ಒಡಿಶಾದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಸ್ಕ್ರಬ್ ಟೈಫಸ್ ಸೋಂಕು: ಒಡಿಶಾ ಆರೋಗ್ಯ ನಿರ್ದೇಶಕ ನಿರಂಜನ್ ಮಿಶ್ರಾ, ಒಡಿಶಾದ ಹಲವು ಜಿಲ್ಲೆಗಳಲ್ಲಿ ಸ್ಕ್ರಬ್ ಟೈಫಸ್ ಸೋಂಕುಗಳು ದಾಖಲಾಗಿವೆ. ಜನರು ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಲಾಗುತ್ತಿದೆ. ಸ್ಕ್ರಬ್ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳ ಸಂಖ್ಯೆಯನ್ನು 22 ಸಾವಿರಕ್ಕೆ ಹೆಚ್ಚಿಸಲಾಗಿದೆ. ಒಡಿಶಾ ಸರ್ಕಾರವು ರಾಜ್ಯದಲ್ಲಿ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ನ ಹೆಚ್ಚಳದ ಬಗ್ಗೆ ಜಾಗರೂಕತೆಯನ್ನು ಹೆಚ್ಚಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಕೇಳಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಲ್ಲಾ ಪ್ರಧಾನ ಜಿಲ್ಲಾ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ರಾಜಧಾನಿ ಆಸ್ಪತ್ರೆಗಳ ನಿರ್ದೇಶಕರಿಗೆ ನಿರ್ದೇಶನಗಳನ್ನು ನೀಡಿದೆ ಎಂದಿದ್ದಾರೆ.
ಸ್ಕ್ರಬ್ ಟೈಫಸ್ ಹೇಗೆ ಸಂಭವಿಸುತ್ತದೆ? : ಸೂಕ್ತ ಆ್ಯಂಟಿಬಯೋಟಿಕ್‌ಗಳನ್ನು ಬಳಸಬೇಕು ಮತ್ತು ಔಷಧಗಳ ಸಾಕಷ್ಟು ದಾಸ್ತಾನು ಇಟ್ಟುಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಸ್ಕ್ರಬ್ ಟೈಫಸ್ ಎಂಬುದು ಓರಿಯೆಂಟಿಯಾ ಸುತ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಈ ನಿರ್ದಿಷ್ಟ ರೀತಿಯ ಕೀಟ ಕಡಿತದಿಂದ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ.
ಸ್ಕ್ರಬ್ ಟೈಫಸ್‌ನ ಸಾಮಾನ್ಯ ಲಕ್ಷಣ: ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಅಥವಾ ಹುಳ ಕಚ್ಚಿದ 10 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಜ್ವರ, ತಲೆನೋವು, ದೇಹದ ನೋವು ಮತ್ತು ಕೆಲವೊಮ್ಮೆ ದೇಹದ ಮೇಲೆ ದದ್ದು, ಮೈ ಕೈ ನೋವು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಸೋಂಕು ಹರಡುವ ಹುಳ ಕಚ್ಚಿದ ಜಾಗದಲ್ಲಿ ಉಬ್ಬಿದ ರೀತಿಯಾಗಿ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದನ್ನು ಎಸ್ಚಾರ್ ಎಂದೂ ಕರೆಯುತ್ತಾರೆ. ಇದು ಮಾನಸಿಕ ಅಸ್ವಸ್ಥತೆಯಿಂದ ಹಿಡಿದು ಕೋಮಾಕ್ಕೂ ಕಾರಣವಾಗುತ್ತದೆ. ಇವು ಮರಗಳಲ್ಲಿವೆ. ಹೊಲಗಳಲ್ಲಿ ಹೆಚ್ಚು ಸಮಯ ಕಳೆಯುವ ಮತ್ತು ಕಾಡಿಗೆ ಹೋಗುವ ಜನರು ಇವುಗಳಿಂದ ಜಾಗರೂಕರಾಗಿರಬೇಕು.
ಒಡಿಶಾ ಆರೋಗ್ಯ ಇಲಾಖೆ ಹೇಳುವುದೇನು?: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ, ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ತಡೆಗಟ್ಟುವಿಕೆಗಾಗಿ ತೀವ್ರ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಲಾಗುತ್ತದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಪರೀಕ್ಷಾ ಕಿಟ್‌ಗಳನ್ನು ಖರೀದಿಸಿ ಸರಬರಾಜು ಮಾಡುವ ಮೂಲಕ ಡಿಪಿಎಚ್‌ಎಲ್‌ನಲ್ಲಿ ಪರೀಕ್ಷೆಗಳು ಲಭ್ಯವಾಗುವಂತೆ ಆರೋಗ್ಯ ಇಲಾಖೆ ತಕ್ಷಣದ ಕ್ರಮಗಳನ್ನು ಕೈಗೊಂಡಿದೆ, ಪಿಯುಒ ಸಂದರ್ಭದಲ್ಲಿ ವೈದ್ಯರಿಗೆ ಸಲಹೆ ನೀಡಲು ವೈದ್ಯರಿಗೆ ಶಿಕ್ಷಣ ನೀಡುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಜಾಗರೂಕತೆ ಹೆಚ್ಚಿಸುವುದು. ಸ್ಕ್ರಬ್ ಟೈಫಸ್‌ಗೆ ಚಿಕಿತ್ಸೆಯೇನು? : ಸ್ಕ್ರಬ್ ಟೈಫಸ್ ರೋಗಕ್ಕೆ ಸಿಡಿಸಿ ಶಿಫಾರಸು ಮಾಡಿದ ಚಿಕಿತ್ಸಾ ಕ್ರಮಗಳು ಹೀಗಿವೆ. ಸ್ಕ್ರಬ್ ಟೈಪಸ್ ಸೋಂಕಿಗೆ ಆ್ಯಂಟಿ ಬಯೊಟಿಕ್ ಡಾಕ್ಸಿಸೈಕ್ಲಿನ್ ಮೂಲಕ ಚಿಕಿತ್ಸೆ ನೀಡಬೇಕು ಎಂದು ಸಿಡಿಸಿ ಸೂಚಿಸುತ್ತದೆ. ಡಾಕ್ಸಿಸೈಕ್ಲಿನ್ ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿ ಬಳಸಬಹುದು. ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಿದರೆ ಆ್ಯಂಟಿ ಬಯೋಟಿಕ್ ಹೆಚ್ಚು ಪರಿಣಾಮ ಬೀರುತ್ತದೆ. ತ್ವರಿತವಾಗಿ ಡಾಕ್ಸಿಸೈಕ್ಲಿನ್ ಚಿಕಿತ್ಸೆ ಪಡೆಯುವ ಜನರು ಸಾಮಾನ್ಯವಾಗಿ ಬೇಗ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ, ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.