ವಿಷಪೂರಿತ ಹಾವನ್ನು ಕೋಣೆಯೊಳಗೆ ಬಿಟ್ಟು ಪತ್ನಿ, ಎರಡು ವರ್ಷದ ಮಗಳನ್ನು ಕೊಂದ ಪಾಪಿ ಪತಿ; ಒಂದು ತಿಂಗಳ ಬಳಿಕ ಸತ್ಯ ಬಯಲು!

snake 11
Published on

ಒಡಿಶಾ: ಇಲ್ಲಿನ ಗಂಜಾಂ ಜಿಲ್ಲೆಯಿಂದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಎರಡು ವರ್ಷದ ಮಗಳನ್ನು ಕೊಲ್ಲಲು ಹಾವನ್ನು ಬಳಸಿದ್ದು, ಈತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯೊಂದಿಗೆ ಮನಸ್ತಾಪ
ಗಂಜಾಂ ಪೊಲೀಸರ ಪ್ರಕಾರ, ಈ ಘಟನೆ ಒಂದೂವರೆ ತಿಂಗಳ ಹಿಂದೆ ಬರ್ಹಾಂಪುರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಬೀರಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಗಾಂವ್‌ನಲ್ಲಿ ನಡೆದಿದೆ. ಆರೋಪಿಯನ್ನು 25 ವರ್ಷದ ಗಣೇಶ್ ಪಾತ್ರ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಬಸಂತಿ ಪಾತ್ರಾ (23) ಜತೆ ಮನಸ್ತಾಪ ಹೊಂದಿದ್ದನಂತೆ.  

ಸುಳ್ಳು ಹೇಳಿ ಹಾವು ಖರೀದಿಸಿದ
ಇಬ್ಬರು 2020 ರಲ್ಲಿ ವಿವಾಹವಾಗಿದ್ದು, ದೇಬಾಸ್ಮಿತಾ ಎಂಬ ಎರಡು ವರ್ಷದ ಮಗಳನ್ನು ಹೊಂದಿದ್ದರು. ಆರೋಪಿಯು ಧಾರ್ಮಿಕ ವಿಧಿವಿಧಾನದ ನೆಪದಲ್ಲಿ ಹಾವನ್ನು ಖರೀದಿಸಿ ಅಕ್ಟೋಬರ್ 6ರಂದು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾವನ್ನು ತಂದು ಪತ್ನಿ ಇರುವ ಕೋಣೆಯಲ್ಲಿ ಬಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಹಾವು ಕಡಿತದಿಂದ ತಾಯಿ ಮತ್ತು ಮಗಳು ಸಾವು
ಹಾವನ್ನು ತಂದು ಕೋಣೆಯಲ್ಲಿ ಬಿಟ್ಟ ಮರುದಿನ ಬೆಳಗ್ಗೆ ಇಬ್ಬರೂ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಆರೋಪಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದ. ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ಮಾತನಾಡಿ, ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು, ಆದರೆ ಆಕೆಯ ಮಾವ ಎಫ್‌ಐಆರ್ ದಾಖಲಿಸಿದ ನಂತರ, ಆರೋಪಿಯನ್ನು ವಿಚಾರಣೆ ನಡೆಸಿ, ಘಟನೆ ನಡೆದು ಒಂದು ತಿಂಗಳ ನಂತರ ಬಂಧಿಸಲಾಯಿತು. ಏಕೆಂದರೆ ಆತನ ವಿರುದ್ಧ ಸಾಕ್ಷ್ಯ ಸಂಗ್ರಹಿಸುವಲ್ಲಿ ಸ್ವಲ್ಪ ವಿಳಂಬವಾಗಿತ್ತು.

ವಿಚಾರಣೆಯ ಸಮಯದಲ್ಲಿ ಆತ ಆರಂಭದಲ್ಲಿ ಆರೋಪ ನಿರಾಕರಿಸಿದ. ನಂತರ ಹಾವು ತಾನಾಗಿಯೇ ಕೋಣೆಗೆ ಪ್ರವೇಶಿಸಿರಬಹುದು ಎಂದು ಹೇಳಿದನಾದರೂ ಅಂತಿಮವಾಗಿ ಅಪರಾಧವನ್ನು ಒಪ್ಪಿಕೊಳ್ಳಲಾಯಿತು. ಈ ಕೊಲೆ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net