ಚಪಾತಿ ಬೇಯಿಸುವಾಗ ಮೂಡಿದ ಜಗನ್ನಾಥ! ಅಚ್ಚರಿಗೊಂಡ ಕುಟುಂಬ, ದೇವರ ಕೋಣೆಯಲ್ಲಿಟ್ಟು ನಿತ್ಯ ಪೂಜೆ

Chapatti Lord Jagannath
Published on

ಭವನೇಶ್ವರ್​: ಒಡಿಶಾದ ಕುಟುಂಬವೊಂದು ಚಪಾತಿಗೆ ಪೂಜೆ ಮಾಡಲು ಆರಂಭಿಸಿದೆ. ಇದನ್ನು ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಬಹುದು. ಎಲ್ಲಾದರೂ ಚಪಾತಿಯನ್ನು ಪೂಜೆ ಮಾಡುತ್ತಾರಾ? ಚಪಾತಿ ನಮ್ಮ ಹೊಟ್ಟೆಯನ್ನು ತುಂಬಿಸುವ ಆಹಾರವೇ ಆಗಿರಬಹುದು. ಆದರೆ, ಚಪಾತಿ ಪೂಜೆ ಮಾಡುವುದನ್ನು ನಾವು ಈವರೆಗೂ ಕಂಡಿಲ್ಲ ಎಂದು ಹೇಳಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ.

ಇಂಥದ್ದೊಂದು ಅಪರೂಪದ ಘಟನೆಗೆ ಒಡಿಶಾದ ಕಟಕ್​ ಜಿಲ್ಲೆಯ ಮಹಾಂಗ ಏರಿಯಾ ಸಾಕ್ಷಿಯಾಗಿದೆ. ಚಪಾತಿಯನ್ನು ಬೇಯಿಸವಾಗ ಅದರ ಒಂದು ಭಾಗದಲ್ಲಿ ಲಾರ್ಡ್​ ಜಗನ್ನಾಥನ ಆಕಾರ ಮೂಡಿದರಿಂದ ಅಚ್ಚರಿಗೊಂಡ ಕುಟುಂಬ ಆ ಚಪಾತಿಯನ್ನು ಪೂಜಿಸಲು ಆರಂಭಿಸಿದ್ದಾರೆ.

ವಿವರಣೆಗೆ ಬರುವುದಾದರೆ, ಮಹಾಂಗದ ಬೆನುಪುರ್​ ಮೂಲದ ಹೇಮಂತ್​ ಬಾಘ್​ ಅವರ ಪುತ್ರಿ ರೋನಿ ಎಂಬಾಕೆ ನಿನ್ನೆ (ಆ.31) ತಮ್ಮ ಅಡುಗೆ ಮನೆಯಲ್ಲಿ ಚಪಾತಿ ಬೇಯಿಸುತ್ತಿದ್ದರು. ಈ ವೇಳೆ ಚಪಾತಿಯ ಮಧ್ಯ ಭಾಗದಲ್ಲಿ ಲಾರ್ಡ್​ ಜಗನ್ನಾಥನನ್ನು ಹೋಲುವ ಆಕಾರ ನೋಡಿ ಅಚ್ಚರಿಗೊಂಡರು. ಇದರ ಬೆನ್ನಲ್ಲೇ ರೋನಿ ಕುಟುಂಬ ಸ್ವಾಮೀಜಿ ಒಬ್ಬರನ್ನು ಮನೆಗೆ ಆಹ್ವಾನಿಸಿ, ಚಪಾತಿಯನ್ನು ಹಿತ್ತಾಳೆ ಪಾತ್ರೆಯಲ್ಲಿ ಇರಿಸಿ ಪೂಜೆ ಮಾಡಿದ್ದಾರೆ.

ಜಗನ್ನಾಥನ ಆಕಾರ ಇರುವ ಚಪಾತಿಯನ್ನು ವಾಟರ್​ಪ್ರೂಫ್ ಕೇಸ್​ನಲ್ಲಿ ಇರಿಸಿ, ಮನೆಯ ಪೂಜಾ ಕೋಣೆಯಲ್ಲಿಟ್ಟು ಪೂಜಿಸಲು ಆರಂಭಿಸಿದ್ದಾರೆ. ಈ ಘಟನೆಯ ಬಗ್ಗೆ ತಿಳಿದಕೂಡಲೇ ಅನೇಕ ಜನರು ಈ ಅಪರೂಪದ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಲು ಹೇಮಂತ್​ ಬಾಘ್​ ಅವರ ಮನೆಗೆ ಜಮಾಯಿಸುತ್ತಿದ್ದಾರೆ.

ನಾವು ಇಂದು (ಆ.31) ರಕ್ಷಾ ಬಂಧನವನ್ನು ಆಚರಿಸುತ್ತಿದ್ದೆವು. ನಮ್ಮ ಅಡುಗೆ ಮನೆಯಲ್ಲಿನ ಚಪಾತಿಯಲ್ಲಿ ಜಗನ್ನಾಥನ ಚಿತ್ರ ಕಾಣಿಸಿತು. ಇದು ಮಂಗಳಕರ ಘಟನೆ ಎಂದು ನಾವು ನಂಬುತ್ತೇವೆ. ನಾವು ನಮ್ಮ ಮನೆಯಲ್ಲಿ ಚಪಾತಿಯನ್ನು ಪೂಜಿಸುತ್ತೇವೆ ಎಂದು ಹೇಮಂತ್​ ಬಾಘ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net