

ಕೋಲಾರ: ಶಿಕ್ಷಕರು ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ್ದ ಪ್ರಕರಣ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ ಜಿಲ್ಲೆಯಲ್ಲೀಗ ಮುರಾರ್ಜಿ ದೇಸಾಯಿ ವಸತಿ ಶಾಲೆಯು ಮತ್ತೊಂದು ಪ್ರಕರಣದ ಮುನ್ನೆಲೆಗೆ ಬಂದಿದೆ.
ಮಾಲೂರು ತಾಲೂಕಿನ ವಸತಿ ಶಾಲೆಯ ಶಿಕ್ಷಕನೋರ್ವನ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಫೋಟೊ, ವಿಡಿಯೋಗಳು ಇರುವುದು ಬೆಳಕಿಗೆ ಬಂದಿದ್ದು, ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಮಲದ ಗುಂಡಿ ಪ್ರಕರಣವು ಇಬ್ಬರ ಶಿಕ್ಷಕರ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ಶಾಲೆಯ ಶಿಕ್ಷಕನೋರ್ವ ಮಕ್ಕಳ ಅಶ್ಲೀಲ ಫೋಟೊ ಹಾಗೂ ವಿಡಿಯೋಗಳನ್ನು ತೆಗೆದು ಕಿರುಕುಳ ನೀಡುತ್ತಿದ್ದ ಬಗ್ಗೆ ಮಕ್ಕಳು, ಪಾಲಕರು ಮತ್ತು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಮಾಸ್ತಿ ಠಾಣೆ ಪೊಲೀಸರು, ಶಿಕ್ಷಕ ಮುನಿಯಪ್ಪನ ಮೊಬೈಲ್‌ವಶಕ್ಕೆ ಪಡೆದುಕೊಂಡಿದ್ದರು. ಮೊಬೈಲ್‌ನಲ್ಲಿ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳು ಇರುವುದು ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಅವರು ನೀಡಿದ ದೂರು ಆಧರಿಸಿ ಮುನಿಯಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಪ್ರಕರಣ ರದ್ದುಗೊಳಿಸುವಂತೆ ಹೈ ಮೋರೆ
ಪ್ರಕರಣ ದಾಖಲಾದ ಬಳಿಕ ಶಿಕ್ಷಕ ಮುನಿಯಪ್ಪ ತನ್ನ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಮುನಿಯಪ್ಪ ಅರ್ಜಿ ತಿರಸ್ಕಾರ ಮಾಡಿ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದೆ. ಪ್ರಕರಣದ ತನಿಖೆ ವೇಳೆ ಮುನಿಯಪ್ಪ ಬಳಿಯಿದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ಆತನ ಮೊಬೈಲ್‌ನಲ್ಲಿ ಸಾವಿರಾರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿದ್ದವೆಂಬ ಅಂಶ ಬಯಲಿಗೆ ಬಂದಿದೆ ಎನ್ನಲಾಗುತ್ತಿದೆ.
ನಾಲ್ವರ ವಿರುದ್ಧ ಕೇಸ್
ವಸತಿ ನಿಯಲಯದ ಆವರಣದಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳನ್ನು ಬಳಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಆರೋಪದಡಿಯಲ್ಲಿ ಪೊಲೀಸರು ಶಾಲೆಯ ಪ್ರಾಂಶುಪಾಲೆ, ವಾರ್ಡನ್ ಸೇರಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದರು. ಜತೆಗೆ ಹಿರಿಯ ಅಧಿಕಾರಿಗಳು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಕೆಲ ಶಿಕ್ಷಕರು ಶಾಲೆಯ ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ಫೋಟೋ, ವಿಡಿಯೋಗಳನ್ನು ಸೆರೆಹಿಡಿದಿದ್ದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿಕ್ಷಕನ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ. ಎಫ್‌ಎಸ್‌ಎಲ್ ವರದಿ ಬಂದ ನಂತರ, ಅದನ್ನು ಆಧರಿಸಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.