ಮಹಾರಾಷ್ಟ್ರ ಸಿಎಂ ಪತ್ನಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಇಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ವಜಾ! Amruta Fadnavis

untitled-design-17-688333cf215c5
Published on

Amruta Fadnavis: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್ ಅವರ ಪತ್ನಿ ಅಮೃತ ಫಡ್ನಾವೀಸ್​ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದ ಇಬ್ಬರು ವ್ಯಕ್ತಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುಣೆ ನ್ಯಾಯಾಲಯ ತಿರಸ್ಕರಿಸಿದೆ.

ಇಬ್ಬರಿಗೆ ಜಾಮೀನು ತಿರಸ್ಕರಿಸಿರುವ ಕೋರ್ಟ್​, ಉಳಿದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಅಮೃತ ಅವರ ವಿರುದ್ಧ ಕೆಟ್ಟದಾಗಿ ಪೋಸ್ಟ್​ ಮಾಡಿದ ಸಂಬಂಧ ವಕೀಲ ಬಸವರಾಜ್ ಯಾದ್ವಾಡ್ ಎಂಬುವರು ಏಪ್ರಿಲ್​ನಲ್ಲಿ ದೂರು ನೀಡಿದ್ದರು. ಈ ಸಂಬಂಧ ಪುಣೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ಆರೋಪಿಗಳನ್ನು ನಿಖಿಲ್ ಸಂಕ್ಪಾಲ್, ದತ್ತ ಚೌಧರಿ, ಬಲಿರಾಮ್ ಪಂಡಿತ್, ಆಶಿಶ್ ವಾಂಖೆಡೆ, ಶೈಲೇಶ್ ವರ್ಮಾ, ಭೂಮಿಶ್ ಸೇವ್ ಮತ್ತು ಅಭಿಜಿತ್ ಫಡ್ನಿಸ್ ಎಂದು ಗುರುತಿಸಲಾಗಿದೆ. ಎಲ್ಲ ಏಳು ಮಂದಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ದರು. ಈ ವೇಳೆ ನಿಖಿಲ್ ಸಂಕ್ಪಾಲ್ ಮಾತ್ರ ನೋಟಿಸ್​ಗೆ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಈ ಪ್ರಕರಣದಲ್ಲಿ ಪಂಡಿತ್​, ಆಶಿಶ್ ವಾಂಖೆಡೆ ಹಾಗೂ ವರ್ಮಾರನ್ನು ಪೊಲೀಸರು ಬಂಧಿಸಿದ್ದರು. ಉಳಿದ ಆರೋಪಿಗಳಾದ ಭೂಮಿಶ್​ ಹಾಗೂ ಅಭಿಜಿತ್​ ತಲೆಮರೆಸಿಕೊಂಡಿದ್ದರು.

ಆರೋಪಿಗಳಲ್ಲಿ ಒಬ್ಬನಾದ ನಿಖಿಲ್ ಸಂಕ್ಪಾಲ್ ಆಕ್ಷೇಪಾರ್ಹ ಪೋಸ್ಟ್​ ಅಪ್​ಲೋಡ್​ ಮಾಡಿದ್ದ. ಈ ಪೋಸ್ಟ್​ ವೈರಲ್​ ಆಗಿ, 16 ಸಾವಿರಕ್ಕೂ ಹೆಚ್ಚು ಜನ ಈ ಪೋಸ್ಟ್​ನ್ನು ವೀಕ್ಷಿಸಿದ್ದರು. ಅಲ್ಲದೆ, 895 ಜನರು ಲೈಕ್​ ಮತ್ತು 187 ಜನ ರೀ ಟ್ವೀಟ್​ ಮಾಡಿದ್ದರು. ಇದರಲ್ಲಿ ಉಳಿದ ಆರು ಮಂದಿ ಆರೋಪಿಗಳು ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಚೌದ್ರಿ, ಪಂಡಿತ್​, ವಾಂಖೆಡೆ ಹಾಗೂ ಮರ್ಮಾ ಹೆಚ್ಚುವರಿ ಸೆಷನ್ಸ್​ ನ್ಯಾಯಧೀಶ ಎ.ಎಸ್​ ಗಾಂಧಿ ಬಳಿ ಜಾಮೀನು ಕೋರಿದ್ದರು. ಅದೇ ರೀತಿ ತಲೆಮರೆಸಿಕೊಂಡಿರುವ ಭೂಮಿಶ್​, ಅಭಿಜಿತ್​​ ಕೂಡ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಸದ್ಯ ನಾಲ್ಕು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಭೂಮಿಶ್ ಸೇವ್ ಹಾಗೂ ಅಭಿಜಿತ್​ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಈ ಬಗ್ಗೆ ಮಾತನಾಡಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಕವೇಡಿಯಾ, ವ್ಯಕ್ತಿತ್ವ ಅನ್ನೋದು ಪ್ರತಿಯೊಬ್ಬ ಮಹಿಳೆಗೆ ಆಭರಣದಂತೆ. ಆಕ್ಷೇಪಾರ್ಹ ಪೋಸ್ಟ್​ನಲ್ಲಿ ಆ ವ್ಯಕ್ತಿತ್ವವನ್ನೇ ಅಣಕಿಸಿರುವುದರಿಂದ ಜಾಮೀನು ನೀಡಬಾರದು ಎಂದು ವಾದಿಸುತ್ತೇನೆ ಎಂದರು. ಅದೇ ರೀತಿ ಅಮೃತ ಫಡ್ನಾವೀಸ್​ ಪರ ವಾದ ಮಂಡಿಸಿದ ವಕೀಲರಾದ ಎಸ್​ಕೆ ಜೈನ್​ ಕೂಡ ಜಾಮೀನು ನೀಡುವುದನ್ನು ವಿರೋಧಿಸಿದ್ದಾರೆ.

ಆರೋಪಿಗಳು ಮಹಿಳೆಯ ಘನತೆಯನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದು, ಅದನ್ನು ರೀಟ್ವೀಟ್​ ಮಾಡಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಇಲ್ಲಿ ಆರೋಪಿಗಳು ಮರು ಟ್ವೀಟ್​ ಮಾಡುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿಲ್ಲ. ಪೊಲೀಸರು ನೋಟಿಸ್​ ನೀಡಿದ್ದರೂ, ಅವರ ತನಿಖೆಗೆ ಸಹಕರಿಸಲು ವಿಫಲವಾಗಿದ್ದಾರೆ. ಆದರಿಂದ, ಅವರು "ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net